​ಉಡುಪಿ : ಕರ್ನಾಟಕ ಬಂದ್‌ಗೆ ಹಲವು ಸಂಘಟನೆಗಳ ಬೆಂಬಲ

Update: 2020-09-27 15:20 GMT

ಉಡುಪಿ, ಸೆ. 27: ರೈತ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆ.28ರಂದು ನಡೆಸಲು ಉದ್ದೇಶಿಸಿರುವ ಸ್ವಯಂ ಪ್ರೇರಿತ ಕರ್ನಾಟಕ ಬಂದ್‌ಗೆ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಸುಮಾರು 20ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಸೂಚಿಸಿದೆ.

‘ಬಸ್ ಮಾಲಕರನ್ನು ವೈಯಕ್ತಿಕವಾಗಿ ಸಂಪರ್ಕಿಸಿ ಬಂದ್‌ಗೆ ಬೆಂಬಲ ನೀಡು ವಂತೆ ಮನವಿ ಮಾಡಿದ್ದೇವೆ. ಅದೇ ರೀತಿ ವರ್ತಕರನ್ನು ಭೇಟಿ ಮಾಡಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವಂತೆ ತಿಳಿಸಿದ್ದೇವೆ. ಹೊಟೇಲ್ ಮಾಲಕರನ್ನು ಸಂಪರ್ಕಿಸಿ ಸಮಸ್ಯೆಯನ್ನು ಅರ್ಥ ಮಾಡಿಸಿ ದ್ದೇವೆ. ಹಾಗಾಗಿ ನಾಳೆ ಬಹುತೇಕ ಬಂದ್ ಆಗುವ ವಿಶ್ವಾಸ ಇದೆ’ ಎಂದು ಸಿಪಿಎಂ ಉಡುಪಿ ಜಿಲ್ಲಾ ಕಾರ್ಯ ದರ್ಶಿ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

ವಿವಿಧ ಸಂಘಟನೆಗಳ ಪ್ರಮುಖರು ಬೆಳಗ್ಗೆ ಆರು ಗಂಟೆಗೆ ಉಡುಪಿ ನಗರದಲ್ಲಿ ಸಂಚರಿಸಿ ಅಂಗಡಿಮುಗ್ಗಟ್ಟುಗಳನ್ನು ಬಂದ್ ಮಾಡುವಂತೆ ಮನವಿ ಮಾಡಲಾಗುವುದು. ನಾಳಿನ ಪರಿಸ್ಥಿತಿಯನ್ನು ನೋಡಿ ಪ್ರತಿಭಟನೆ ನಡೆಸಲಾಗು ವುದು. ಈವರೆಗೆ ಪ್ರತಿಭಟನೆ, ಮೆರವಣಿಗೆ ನಡೆಸುವ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಈಗಾಗಲೇ ಲಾಕ್‌ಡೌನ್‌ನಿಂದ ಸಾಕಷ್ಟು ನಷ್ಟ ಅನುಭವಿಸಿರುವ ಸರ್ವಿಸ್ ಹಾಗೂ ಸಿಟಿಬಸ್‌ಗಳು, ನಾಳಿನ ಬಂದ್ ಹಿನ್ನೆಲೆಯಲ್ಲಿ ಜನ ಸಂಚಾರ ವಿರಳ ಇರುವ ಕಾರಣ ರಸ್ತೆಗೆ ಇಳಿಯುವ ಸಾಧ್ಯತೆ ಕಡಿಮೆ ಇದೆ. ‘ನಾಳಿನ ಬಂದ್ ಕಾರಣ ಜನ ಹೊರಗಡೆ ಬರುವುದಿಲ್ಲ. ಆದುದರಿಂದ ನಷ್ಟದಲ್ಲಿ ಬಸ್ ಓಡಾಟ ನಡೆಸಬೇಕಾಗುತ್ತದೆ. ಅದಕ್ಕಾಗಿ ಕರಾವಳಿ ಬಸ್ ಮಾಲಕರ ಸಂಘದ ಅಧೀನ ದಲ್ಲಿರುವ ಸುಮಾರು 85 ಬಸ್‌ಗಳು ಸಂಚಾರ ನಡೆಸುವುದಿಲ್ಲ ಎಂದು ಸಂಘದ ಅಧ್ಯಕ್ಷ ರಾಘವೇಂದ್ರ ಭಟ್ ತಿಳಿಸಿದ್ದಾರೆ.

‘ಉಡುಪಿಯಲ್ಲಿ ಸಿಟಿ ಹಾಗೂ ಸರ್ವಿಸ್ ಬಸ್‌ಗಳು ಎಂದಿನಂತೆ ಓಡಾಟ ನಡೆಸುತ್ತದೆ. ನಮ್ಮೆಲ್ಲ ಬಸ್ ಸಿಬ್ಬಂದಿಗಳಿಗೆ ಬಸ್ ಸಂಚಾರ ನಡೆಸು ವಂತೆ ಸೂಚನೆ ಕೊಟ್ಟಿದ್ದೇವೆ. ಆದುದರಿಂದ ಉಡುಪಿ ಜಿಲ್ಲೆಯಲ್ಲಿ ಬಸ್ ಸಂಚಾರ ಬಂದ್ ಇರುವುದಿಲ್ಲ ಎಂದು ಉಡುಪಿ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಹಾಗೂ ಕೆನರಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ನಾಯಕ್ ಕುಯಿಲಾಡಿ ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಎಂದಿನಂತೆ ಇರುತ್ತದೆ. ಆದರೆ ಮುಂದೆ ಜನ ಸಂಚಾರ ಹಾಗೂ ಪರಿಸ್ಥಿತಿಯನ್ನು ಅವಲೋಕಿಸಿ, ಬಸ್ ಸಂಚಾರ ನಡೆಸ ಬೇಕೆ ಬೇಡವೇ ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಕೆಎಸ್‌ಆರ್‌ಸಿಟಿ ಉಡುಪಿ ಡಿಪೋ ವ್ಯವಸ್ಥಾಪಕ ಉದಯ ಕುಮಾರ್ ತಿಳಿಸಿದ್ದಾರೆ.

ಬಿಗಿ ಪೊಲೀಸ್ ಬಂದೋಬಸ್ತ್ 

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಉಡುಪಿ ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.

ಭದ್ರತೆಗಾಗಿ ಎರಡು ಕೆಎಸ್‌ಆರ್‌ಪಿ, ಆರು ಜಿಲ್ಲಾ ಸಶಸ್ತ್ರ ಪಡೆ ತುಕಡಿಗಳನ್ನು ನಿಯೋಜಿಸಲಾಗುವುದು. ಅಲ್ಲದೆ ಅಧಿಕಾರಿಗಳು ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭದ್ರತಾ ನಿಗಾ ವಹಿಸಲಿರುವರು. ಬಲವಂತದ ಬಂದ್‌ಗೆ ಅವಕಾಶ ಇಲ್ಲ. ಅಂತವರ ವಿರುದ್ಧ ಕ್ರಮ ತೆಗೆದು ಕೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News