ಟ್ರಂಪ್ ರನ್ನು ಹಿಟ್ಲರ್ ಪ್ರಚಾರ ಮುಖ್ಯಸ್ಥ ಗೋಬೆಲ್ಸ್‌ ಗೆ ಹೋಲಿಸಿದ ಬೈಡನ್

Update: 2020-09-27 15:24 GMT

ವಾಶಿಂಗ್ಟನ್, ಸೆ. 27: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜರ್ಮನಿಯ ನಾಝಿ ಯುಗದ ಸರ್ವಾಧಿಕಾರಿ ಹಿಟ್ಲರ್‌ನ ಪ್ರಚಾರ ವಿಭಾಗದ ಮುಖ್ಯಸ್ಥ ಜೋಸೆಫ್ ಗೋಬೆಲ್ಸ್‌ನಂತೆ ಎಂದು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರ ಪ್ರತಿಸ್ಪರ್ಧಿಯಾಗಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಹೇಳಿದ್ದಾರೆ. ಮಂಗಳವಾರ ನಡೆಯಲಿರುವ ತಮ್ಮ ನಡುವಿನ ಮೊದಲ ಟಿವಿ ಚರ್ಚೆಯಲ್ಲಿ ನಾನು ಟ್ರಂಪ್‌ರಿಂದ ವೈಯಕ್ತಿಕ ದಾಳಿಗಳು ಮತ್ತು ಸುಳ್ಳುಗಳನ್ನು ನಿರೀಕ್ಷಿಸುತ್ತಿದ್ದೇನೆ ಎಂಬುದಾಗಿಯೂ ಅವರು ಹೇಳಿದ್ದಾರೆ.

‘‘ಅವರೊಂದಿಗೆ ಚರ್ಚೆ ಮಾಡುವುದು ತುಂಬಾ ಕಷ್ಟದ ಕೆಲಸ’’ ಎಂದು ಎಂಎಸ್‌ಎನ್‌ಬಿಸಿ ಟೆಲಿವಿಶನ್‌ಗೆ ಶನಿವಾರ ನೀಡಿದ ಸಂದರ್ಶನದಲ್ಲಿ ದೇಶದ ಮಾಜಿ ಉಪಾಧ್ಯಕ್ಷರೂ ಆಗಿರುವ ಬೈಡನ್ ನುಡಿದರು.

‘‘ಅದು ನೇರ ದಾಳಿಗೆ ವೇದಿಕೆಯೆಂದು ನನಗನಿಸುತ್ತದೆ. ಅವರು ಹೆಚ್ಚಾಗಿ ವೈಯಕ್ತಿಕ ದಾಳಿಯನ್ನೇ ಮಾಡುತ್ತಾರೆ. ಅದು ಮಾತ್ರ ಅವರಿಗೆ ಗೊತ್ತಿರುವುದು’’ ಎಂದು ಟ್ರಂಪ್‌ರನ್ನು ಉದ್ದೇಶಿಸುತ್ತಾ ಅವರು ಹೇಳಿದರು.

ಓಹಿಯೊ ರಾಜ್ಯದ ಕ್ಲೀವ್‌ಲ್ಯಾಂಡ್‌ನಲ್ಲಿ ಮಂಗಳವಾರ ಎದುರಾಳಿಗಳ ನಡುವೆ ಚರ್ಚೆ ನಡೆಯಲಿದೆ. ಇದು ಅವರಿಬ್ಬರ ನಡುವಿನ ಪ್ರಥಮ ಮುಖಾಮುಖಿಯಾಗಿರಲಿದೆ. ನವೆಂಬರ್ 3ರಂದು ನಡೆಯಲಿರುವ ಚುನಾವಣೆಯ ಮೊದಲು ಅವರಿಬ್ಬರು ಇನ್ನೂ ಎರಡು ಬಾರಿ ಚರ್ಚೆಗಾಗಿ ಮುಖಾಮುಖಿಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News