ಮೆಕ್ಸಿಕೋ ಬಾರ್‌ನಲ್ಲಿ ಶೂಟೌಟ್: 11 ಮಂದಿ ಬಲಿ

Update: 2020-09-28 03:55 GMT

ಮೆಕ್ಸಿಕೋ ಸಿಟಿ, ಸೆ.28: ಕೇಂದ್ರ ಮೆಕ್ಸಿಕೋದ ಗುವಾನಾಜೋಟೊ ರಾಜ್ಯದ ಹೆದ್ದಾರಿ ಬದಿಯ ಬಾರ್ ಒಂದರಲ್ಲಿ ಆಗಂತುಕನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ.

ಜರಲ್ ಡೆಲ್ ಪ್ರೊಗ್ರೆಸೊ ನಗರದ ಬಾರ್ ಆವರಣದಲ್ಲಿ ಗುಂಡಿನಿಂದ ಜರ್ಜರಿತವಾದ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂಧು ಸರಕಾರಿ ಅಭಿಯೋಜಕರು ಹೇಳಿದ್ದಾರೆ.

ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರು ಬಾರ್ ಡ್ಯಾನ್ಸರ್‌ಗಳಾಗಿ ಕೆಲಸ ಮಾಡುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ದಾಳಿ ಹಿಂದಿನ ಉದ್ದೇಶ ತಿಳಿದುಬಂದಿಲ್ಲ. ಇದು ಡ್ರಗ್ ಗ್ಯಾಂಗ್ ಹತ್ಯೆ ಎಂದು ಶಂಕಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಮೆಕ್ಸಿಕೋದ ಅತ್ಯಂತ ಹಿಂಸಾಪೀಡಿತ ನಗರವಾದ ಗುವಾನಾಜೋಟೊದಲ್ಲಿ ಆಗಸ್ಟ್ 2ರಂದು ಸ್ಥಳೀಯ ಗ್ಯಾಂಗ್ ಮುಖಂಡನೊಬ್ಬನನ್ನು ಬಂಧಿಸಿರುವುದರಿಂದ ಹಿಂಸಾಕೃತ್ಯಗಳು ಕಡಿಮೆಯಾಗಬಹುದು ಎಂದು ಅಧಿಕಾರಿಗಳು ಹೇಳಿದ್ದರು.

ರಾಜ್ಯದಲ್ಲಿ ಕಳೆದ ಜುಲೈನಲ್ಲಿ 403 ಮಂದಿಯ ಹತ್ಯೆಯಾಗಿದ್ದರೆ, ಆಗಸ್ಟ್‌ನಲ್ಲಿ ಈ ಪ್ರಮಾಣ 339ಕ್ಕೆ ಇಳಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಬಂಧಿತ ರೌಡಿಯ ಸ್ಥಾನ ತುಂಬಲು ಗ್ಯಾಂಗ್‌ಗಳ ನಡುವೆ ಹೋರಾಟ ನಡೆಯುತ್ತಿರುವುದರಿಂದ ಸೆಪ್ಟೆಂಬರ್‌ನಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News