ಟರ್ಕಿ: ಖಶೋಗಿ ಹಂತಕರ ವಿರುದ್ಧ 2ನೇ ದೋಷಾರೋಪ ಪಟ್ಟಿ ಸಿದ್ಧ

Update: 2020-09-28 17:08 GMT

ಇಸ್ತಾಂಬುಲ್ (ಟರ್ಕಿ), ಸೆ. 28: ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ 2018ರಲ್ಲಿ ನಡೆದ ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಗೆ ಸಂಬಂಧಿಸಿ, ಸೌದಿ ಅರೇಬಿಯದ ಆರು ಅಧಿಕಾರಿಗಳ ವಿರುದ್ಧ ಟರ್ಕಿಯ ಪ್ರಾಸಿಕ್ಯೂಟರ್‌ಗಳು ಎರಡನೇ ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ ಎಂದು ಎನ್‌ಟಿವಿ ಸುದ್ದಿ ಚಾನೆಲ್ ಮತ್ತು ಇತರ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.

ಆದರೆ, ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಇಸ್ತಾಂಬುಲ್‌ನ ನ್ಯಾಯಾಲಯವೊಂದರಲ್ಲಿ ನಡೆಯುತ್ತಿರುವ ಮೊಕದ್ದಮೆಯ ಆರು ಸೌದಿ ಆರೋಪಿಗಳ ವಿರುದ್ಧವೇ ಎರಡನೇ ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಲಾಗಿದೆಯೇ ಎನ್ನುವುದು ತಿಳಿದಿಲ್ಲ. ಈ ಆರೋಪಿಗಳ ಅನುಪಸ್ಥಿತಿಯಲ್ಲೇ ಟರ್ಕಿಯಲ್ಲಿ ವಿಚಾರಣೆ ನಡೆಯುತ್ತಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಸೌದಿ ಅರೇಬಿಯದಲ್ಲೂ ವಿಚಾರಣೆ ನಡೆದಿದೆ. ಅಲ್ಲಿನ ನ್ಯಾಯಾಲಯವೊಂದು 8 ಮಂದಿಗೆ ಮರಣ ದಂಡನೆ ವಿಧಿಸಿತ್ತು. ಆದರೆ, ಇತ್ತೀಚೆಗೆ ಸೌದಿ ನ್ಯಾಯಾಲಯವು ಅವರ ಮರಣ ದಂಡನೆಯನ್ನು ಜೈಲು ಶಿಕ್ಷೆಯಾಗಿ ಪರಿವರ್ತಿಸಿದೆ.

 ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಟೀಕಾಕಾರರಾಗಿದ್ದ ‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಯ ಅಂಕಣಕಾರ ಖಶೋಗಿಯನ್ನು 2018 ಅಕ್ಟೋಬರ್ 2ರಂದು ಕೌನ್ಸುಲೇಟ್ ಕಚೇರಿಯ ಒಳಗೆ ಬರ್ಬರವಾಗಿ ಹತ್ಯೆಗೈಯಲಾಗಿತ್ತು. ಅವರ ಮೃತದೇಹ ಪತ್ತೆಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News