ಕುಂಜೂರಿನಲ್ಲಿ ತುಳು ಬರೆಕ ಅಭಿಯಾನ, ತುಳು ಲಿಪಿ ಫಲಕ ಅಳವಡಿಕೆಗೆ ಚಾಲನೆ

Update: 2020-09-29 17:18 GMT

ಪಡುಬಿದ್ರಿ : ತುಳುವಾಸ್ ಕೌನ್ಸಿಲ್ ಆಯೋಜಿಸಿರುವ "ತುಳು ಬರೆಕ" ಅಭಿಯಾನಕ್ಕೆ ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಸೋಮವಾರ ಚಾಲನೆ ನೀಡಲಾಯಿತು.

ತುಳು ಭಾಷೆ - ಸಂಸ್ಕೃತಿಯ ಮೂಲ ಮೌಲ್ಯವನ್ನು ತಿಳಿಯುವ ಉದ್ದೇಶದಿಂದ 'ತುಳು ಲಿಪಿ' ಕಲಿಯಬೇಕು. ಜನರಿಗೆ ಕಲಿಸಬೇಕು, ತುಳುಲಿಪಿಯಲ್ಲಿ ಬರೆಯಲಾದ ಸಾಹಿತ್ಯವನ್ನು ಓದಬೇಕು ಎಂಬ ಉದ್ದೇಶಗಳಿಂದ "ತುಳು ಬರೆಕ" ಅಭಿಯಾನದ ಅಂಗವಾಗಿ ಕುಂಜೂರು ಶ್ರೀ ದುರ್ಗಾದೇವಸ್ಥಾನದ "ನಾಮ ಫಲಕ"ವನ್ನು ತುಳು ಲಿಪಿಯಲ್ಲಿ ಬರೆಯಿಸಿ ಅಳವಡಿಸಲಾಯಿತು. 

ಪವಿತ್ರಪಾಣಿ ಕೆ. ಎಲ್. ಕುಂಡಂತಾಯ ಮಾತನಾಡಿ, ತುಳು ಬರೆಯುವ ಅಭಿಯಾನದ ಮೊದಲ ಹೆಜ್ಜೆಯಾಗಿ ಕುಂಜೂರಿನ ಯುವಕರು ಕುಂಜೂರು ದೇಗುಲದ ನಾಮಫಲಕವನ್ನು ತುಳುವಿನಲ್ಲೇ ಬರೆಯಿಸಿ ಮಾತೃ ಭಾಷೆಯನ್ನು ಗೌರವಿಸಿದ್ದಾರೆ. ತುಳುವಾಸ್ ಕೌನ್ಸಿಲ್ ಸಂಘಟನೆಯ ಪ್ರಯತ್ನ ಮಾದರಿಯಾಗಿದೆ ಎಂದರು.

ತುಳುವಾಸ್ ಕೌನ್ಸಿಲ್ ನಿರ್ದೇಶಕ ಅವಿನಾಶ್ ಶೆಟ್ಟಿ ಕುಂಜೂರು ಮಾತನಾಡಿ, ತುಳು ಬರೆಕ ಅಭಿಯಾನದ ಅಂಗವಾಗಿ ಕುಂಜೂರು ಶ್ರೀ ದುರ್ಗಾ ದೇವಸ್ಥಾನದ "ನಾಮ ಫಲಕ"ವನ್ನು ತುಳು ಲಿಪಿಯಲ್ಲಿ ಬರೆಯಿಸಿ ಅಳವಡಿಸಲಾಗಿದ್ದು, ಅಭಿಯಾನದ ಮೂಲಕ ಪ್ರತೀ ಮನೆ ಮನೆಗೂ ತುಳು ನಾಮ ಫಲಕ ಅಳವಡಿಸಲು ಯೋಚಿಸಲಾಗಿದೆ ಎಂದರು.

ಶ್ರೀ ದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ದೇವರಾಜ ರಾವ್ ನಡಿಮನೆ, ಆಡಳಿತ ಮಂಡಳಿ ಸದಸ್ಯ ಶ್ರೀವತ್ಸ ರಾವ್, ಅರ್ಚಕ ವೇ.ಮೂ. ಚಕ್ರಪಾಣಿ ಉಡುಪ, ಪ್ರಬಂಧಕ ರಾಘವೇಂದ್ರ ಶೆಟ್ಟಿ, ಶ್ರೀ ದುರ್ಗಾ ಮಿತ್ರವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ, ವಿಶ್ವನಾಥ ಉಡುಪ, ಸುಬ್ರಹ್ಮಣ್ಯ ಭಟ್, ಶ್ರೀಧರ ಮಂಜಿತ್ತಾಯ, ಅನಂತರಾಮ ರಾವ್, ರಘುಪತಿ ಉಡುಪ, ರಾಕೇಶ್ ಕುಂಜೂರು, ಪುಷ್ಪರಾಜ ಶೆಟ್ಟಿ, ಭಾರ್ಗವ ಕುಂಡಂತಾಯ, ಕೌಶಿಕ್ ಉಡುಪ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News