ಬಡ ದೇಶಗಳಿಗೆ 12 ಕೋಟಿ ಕೊರೋನ ಪರೀಕ್ಷಾ ಕಿಟ್ ವಿತರಣೆ: ವಿಶ್ವ ಆರೋಗ್ಯ ಸಂಸ್ಥೆ

Update: 2020-09-29 17:22 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಸೆ. 29: ಕೋವಿಡ್-19 ತಪಾಸಣೆಗಾಗಿ ಸುಮಾರು 12 ಕೋಟಿ ಕ್ಷಿಪ್ರ ಪರೀಕ್ಷಾ ಕಿಟ್‌ಗಳನ್ನು ತಲಾ 5 ಡಾಲರ್ ಬೆಲೆ (ಸುಮಾರು 370 ರೂಪಾಯಿ)ಯಲ್ಲಿ ಬಡ ದೇಶಗಳಿಗೆ ವಿತರಿಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಘೋಷಿಸಿದೆ.

ಬಡ ದೇಶಗಳಲ್ಲಿನ ಕೊರೋನ ವೈರಸ್ ತಪಾಸಣೆ ಕೊರತೆಯನ್ನು ನೀಗಿಸಲು 600 ಮಿಲಿಯ ಡಾಲರ್ (ಸುಮಾರು 4,425 ಕೋಟಿ ರೂಪಾಯಿ) ವೆಚ್ಚದ ಯೋಜನೆಯನ್ನು ರೂಪಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾಕಾರ್ಯದರ್ಶಿ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 ಈ ಕ್ಷಿಪ್ರ ಪರೀಕ್ಷಾ ಕಿಟ್‌ಗಳನ್ನು ಮುಂದಿನ ಆರು ತಿಂಗಳುಗಳಲ್ಲಿ 133 ದೇಶಗಳಲ್ಲಿ ವಿತರಿಸಲಾಗುವುದು. ಅವುಗಳು ಸಾಮಾನ್ಯವಾಗಿ ಬಳಸುವ ಪಿಸಿಆರ್ ನ್ಯಾಸಲ್ ಸ್ವಾಬ್ ಪರೀಕ್ಷೆಗಳಷ್ಟು ವಿಶ್ವಾಸಾರ್ಹವಲ್ಲವಾದರೂ, ಕ್ಷಿಪ್ರ ಫಲಿತಾಂಶವನ್ನು ನೀಡುತ್ತದೆ, ಅಗ್ಗವಾಗಿದೆ ಮತ್ತು ಪರೀಕ್ಷೆ ಮಾಡಲು ಸುಲಭವಾಗಿದೆ ಎಂದರು.

‘‘ನಾವು ಒಪ್ಪಂದವೊಂದನ್ನು ಮಾಡಿಕೊಂಡಿದ್ದೇವೆ. ಇದಕ್ಕಾಗಿ ಹಣ ನೀಡಲು ಹಲವರು ಮುಂದೆ ಬಂದಿದ್ದಾರೆ. ಈಗ ಈ ಪರೀಕ್ಷಾ ಕಿಟ್‌ಗಳನ್ನು ಖರೀದಿಸಲು ನಮಗೆ ಪೂರ್ಣ ಪ್ರಮಾಣದ ನಿಧಿ ಬೇಕಾಗಿದೆ’’ ಎಂದು ಗೇಬ್ರಿಯೇಸಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News