ದಂಡ ರಹಿತ ಪಾವತಿಗೆ ಮತ್ತೆ 1 ತಿಂಗಳ ಕಾಲಾವಕಾಶ: ಮೇಯರ್ ದಿವಾಕರ ಪಾಂಡೇಶ್ವರ

Update: 2020-09-30 08:32 GMT

ಮಂಗಳೂರು, ಸೆ.30: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಯನ್ನು ದಂಡ ರಹಿತವಾಗಿ ಪಾವತಿಸಲು ಮತ್ತೆ ಒಂದು ತಿಂಗಳ ಕಾಲಾವಕಾಶ ನೀಡಲಾಗುತ್ತಿದೆ ಎಂದು ಮೇಯರ್ ದಿವಾಕರ ಪಾಂಡೇಶ್ವರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ಮಾಹಿತಿ ನೀಡಿದ ಅವರು, ಆಸ್ತಿ ತೆರಿಗೆ ಪಾವತಿಗೆ ಕೊರೋನ ಹಿನ್ನೆಲೆಯಲ್ಲಿ ಸೆಪ್ಟಂಬರ್ 30ರವರೆಗೆ ನೀಡಲಾಗಿದ್ದ ದಂಡ ರಹಿತ ಪಾವತಿಯ ಅವಕಾಶವನ್ನು ಅಕ್ಟೋಬರ್ ಅಂತ್ಯದವರೆಗೆ ವಿಸ್ತರಿಸಲಾಗಿದೆ. ನವೆಂಬರ್ 1ರಿಂದ ದಂಡ ವಿಧಿಸಲಾಗುವುದು ಎಂದು ಹೇಳಿದರು.

ಮನಪಾ ಆಯುಕ್ತ ಅಕ್ಷಯ್ ಶ್ರೀಧರ್‌ ಅವರು ಈ ಕುರಿತು ಮಾಹಿತಿ ನೀಡಿ, ಸ್ವಯಂ ಘೋಷಿತ ಪದ್ಧತಿಯಲ್ಲಿ ಆಸ್ತಿ ತೆರಿಗೆ ವ್ಯವಸ್ಥೆಯಿದೆ. ಕಟ್ಟಡ ಮಾಲಕರು, ಕಟ್ಟಡ ನಿರ್ಮಾಣಕ್ಕೆ ಬಳಸಿದ ವಸ್ತುಗಳು ಹಾಗೂ ವಿಸ್ತೀರ್ಣವನ್ನು ನಿಖರವಾಗಿ ನೀಡಿದ್ದಲ್ಲಿ ಆಸ್ತಿ ತೆರಿಗೆಯ ಮಾಪನ ಸರಿಯಾಗಿ ನಡೆಯುತ್ತದೆ. ಆದರೆ ಕೆಲವರು ಆಸ್ತಿ ತೆರಿಗೆಯಲ್ಲಿ ತಪ್ಪು ಮಾಹಿತಿ ನೀಡಿ ಆಸ್ತಿ ತೆರಿಗೆ ಬಗ್ಗೆ ವಂಚನೆ ಮಾಡಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಸಾರ್ವಜನಿಕರು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಜಾಹೀರಾತು, ಕಟೌಟ್, ಫ್ಲೆಕ್ಸ್‌ಗಳನ್ನು ಪರವಾನಿಗೆ ರಹಿತವಾಗಿ ಹಾಕಲು ಅವಕಾಶ ಇಲ್ಲವಾಗಿದ್ದು, ಈಗಾಗಲೇ ಈ ಬಗ್ಗೆ ಕಾರ್ಯಾಚರಣೆ ಆರಂಭಿಸಲಾಗಿದೆ. ಸಾರ್ವಜನಿಕರು ಅಕ್ರಮವಾಗಿ ಹಾಕಿರುವ ಫ್ಲೆಕ್ಸ್, ಕಟೌಟ್‌ಗಳ ಬಗ್ಗೆ ಮಾಹಿತಿ ನೀಡಿದ್ದಲ್ಲಿ ಕ್ರಮ ವಹಿಸಲಾಗುವುದು ಎಂದು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದರು.

ಗೋಷ್ಠಿಯಲ್ಲಿ ಮನಪಾ ಉಪ ಆಯುಕ್ತ ಡಾ. ಸಂತೋಷ್ ಕುಮಾರ್, ಕಂದಾಯ ಅಧಿಕಾರಿ ಬಿನಯ್, ಪರಿಸರ ಅಭಿಯಂತರ ಮಧು ಉಪಸ್ಥಿತರಿದ್ದರು.

ಉದ್ದಿಮೆ ಪರವಾನಿಗೆ ಆನ್‌ಲೈನ್ : ಅ.2ರಂದು ಪ್ರಾಯೋಗಿಕ ಚಾಲನೆ

ಪಾಲಿಕೆ ವ್ಯಾಪ್ತಿಯ ಎಲ್ಲಾ ಉದ್ದಿಮೆದಾರರಿಗೆ ವ್ಯಾಪಾರ ಪರವಾನಿಗೆಯನ್ನು ಆನ್‌ಲೈನ್ ಮೂಲಕ ನೀಡಲು ಸಾಫ್ಟ್‌ವೇರ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಕಳೆದ ಮನಪಾ ಸಭೆಯಲ್ಲಿ ಇದಕ್ಕೆ ಮಂಜೂರಾತಿ ದೊರಕಿದ್ದು, ಅಕ್ಟೋಬರ್ 2ರಿಂದ ಪ್ರಾಯೋಗಿಕ ಚಾಲನೆ ನೀಡಲಾಗುವುದು. ಉದ್ದಿಮೆದಾರರಿಗೆ ಹಾಗೂ ಅಧಿಕಾರಿಗಳಿಗೆ ವ್ಯಾಪಾರ ಪರವಾನಿಗೆಯ ಸಾಫ್ಟ್‌ವೇರ್ ತರಬೇತಿಯನ್ನು ಮುಂದಿನ ಒಂದು ವಾರದೊಳಗೆ ನಡೆಸಲಾಗುವುದು. ಸಾಫ್ಟ್‌ವೇರ್ ವ್ಯವಸ್ಥೆಯು ಹೊಸ ವ್ಯಾಪಾರ ಪರವಾನಿಗೆಗೆ ಅರ್ಜಿ ಸಲ್ಲಿಸುವುದು, ವ್ಯಾಪಾರ ಪರವಾನಿಗೆಯನ್ನು ನವೀಕರಿಸುವುದು, ವ್ಯಾಪಾರ ಪವಾನಿಗೆಯನ್ನು ರದ್ದುಪಡಿಸುವುದು, ದಾಖಲಾತಿಗಳನು ಹಾಗೂ ಉದ್ದಿಮೆಯ ಫೋಟೊ ಅಪ್‌ಲೋಡ್ ಮಾಡುವುದು, ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸುವುದು, ವ್ಯಾಪಾರ ಪರವಾನಿಗೆಯನ್ನು ಅನುಮೋದಿಸುವುದು, ವ್ಯಾಪಾರ ಪರವಾನಿಗೆಯನ್ನು ಮುದ್ರಿಸುವುದು, ವೆಬ್ ಪೋರ್ಟಲ್ ಮೂಲಕ ಪರವಾನಿಗೆಯ ಸ್ಥಿತಿಯನ್ನು ಪತ್ತೆಹಚ್ಚುವುದು, ಪ್ರತಿ ಉದ್ದಿಮೆಯನ್ನು ಗುರುತಿಸಲು ಜಿಯೋ ಟ್ಯಾಗಿಂಗ್ ವ್ಯವಸ್ಥೆ ಮೊದಲಾದ ವಿಶೇಷತೆಗಳನ್ನು ಸಾಫ್ಟ್‌ವೇರ್‌ನಲ್ಲಿ ಕಲ್ಪಿಸಲಾಗಿದೆ.

- ಅಕ್ಷಯ್ ಶ್ರೀಧರ್, ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News