ಮಂಗಳೂರು: ಮನೆ ತ್ಯಾಜ್ಯ ಪ್ರತ್ಯೇಕಿಸದಿದ್ದಲ್ಲಿ ಬೀಳಲಿದೆ ದಂಡ !

Update: 2020-09-30 08:40 GMT

ಮಂಗಳೂರು, ಸೆ.30: ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ತ್ಯಾಜ್ಯವನ್ನು ಹಸಿ ಹಾಗೂ ಒಣ ಕಸವಾಗಿ ಪ್ರತ್ಯೇಕಿಸಬೇಕಿದೆ. ದಿನನಿತ್ಯ ಹಸಿಕಸ ಸಂಗ್ರಹ ಹಾಗೂ ಶುಕ್ರವಾರದಂದು ಒಣಕಸ ಸಂಗ್ರಹ ನಡೆಯಲಿದೆ. ಪ್ರತ್ಯೇಕಿಸಿ ತ್ಯಾಜ್ಯ ನೀಡದಿದ್ದರೆ ಅಕ್ಟೋಬರ್ 2ರಿಂದ ದಂಡ ವಿಧಿಸಲು ಕ್ರಮ ವಹಿಸಲಾಗುವುದು ಎಂದು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಹಾಗೂ ನೈರ್ಮಲೀಕರಣ ಬೈಲಾ 2019ರಂತೆ ದಂಡ ವಿಧಿಸಲಾಗುವುದು. ಅದರಂತೆ ಮನೆ, ಬೀದಿ ಬದಿ ವ್ಯಾಪಾರಸ್ಥರು ತ್ಯಾಜ್ಯ ವಿಂಗಡಿಸದಿದ್ದಲ್ಲಿ 1500ರೂ.ನಿಂದ 5000 ರೂ.ವರೆಗೆ ವಿಧಿಸಬಹುದಾಗಿದೆ ಎಂದರು.

ಭಾರೀ ತ್ಯಾಜ್ಯ ಉತ್ಪಾದಕರಿಗೆ 15,000 ರೂ.ನಿಂದ 25,000 ರೂ.ವರೆಗೆ, ತೆರೆದ ಪ್ರದೇಶದಲ್ಲಿ ತ್ಯಾಜ್ಯ ಬಿಸಾಕಿದರೆ 1500ರೂ.ನಿಂದ 25,000ರೂ.ವರೆಗೆ , ಬಯೋಮೆಡಿಕಲ್ ತ್ಯಾಜ್ಯ ಘನತ್ಯಾಜ್ಯದೊಂದಿಗೆ 10,000ರೂ.ನಿಂದ 25000ರೂ.ವರೆಗೆ, ಕಟ್ಟಡ ಭಗ್ನಾವಶೇಷಗಳನ್ನು ತೆರೆದ ಪ್ರದೇಶದಲ್ಲಿ ಬಿಸಾಕಿದರೆ ರೂ. 25,000 ದಂಡ ವಿಧಿಸಲಾಗುವುದು ಎಂದು ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಾ ಭಾರೀ ತ್ಯಾಜ್ಯ ಉತ್ಪಾದಕರಿಗೆ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆಯನ್ನು ಕಲ್ಪಿಸಲು ಸೂಚಿಸಲಾಗಿತ್ತು. ಕೋವಿಡ್‌ ನಿಂದಾಗಿ ಅನುಷ್ಠಾನದಲ್ಲಿ ವಿಳಂಬವಾಗಿದೆ. ಆದರೆ ಅ. 2ರಿಂದ ಎಲ್ಲಾ 60 ವಾರ್ಡ್‌ಗಳಲ್ಲಿಯೂ ಕಡ್ಡಾಯವಾಗಿ ಘನತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಪಾಲಿಸದಿದ್ದಲ್ಲಿ ಮೇಲಿನಂತೆ ದಂಡವನ್ನು ವಿಧಿಸಿ ಪ್ರಕರಣ ದಾಖಲಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.

ಘನತ್ಯಾಜ್ಯ ಸಂಸ್ಕರಿಸುವ ಎಲ್ಲಾ ಮನೆಗಳು ಹಾಗೂ ಉದ್ದಿಮೆದಾರರಿಗೆ ಪಾಲಿಕೆ ವತಿಯಿಂದ ಘನತ್ಯಾಜ್ಯ ನಿರ್ವಹಣಾ ಉಪಕರ/ ಸೇವಾ ಶುಲ್ಕದಿಂದ ಶೇ. 50ರಷ್ಟು ವಿನಾಯಿತಿ ನೀಡುವ ಬಗ್ಗೆ ಪ್ರಮಾಣ ಪತ್ರವನ್ನು ವಿತರಿಸಲಾಗುವುದು ಎಂದೂ ಅವರು ಹೇಳಿದರು.

ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ನಿಷೇಧ

ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಮಾರಾಟ ಅಥವಾ ಉಪಯೋಗವನ್ನು ನಿಷೇಧಿಸಲಾಗಿದೆ. ಉದ್ದಿಮೆದಾರರು/ ನಾಗರಿಕರು ಮಾರಾಟ ಅಥವಾ ಉಪಯೋಗಿಸುವುದು ಕಂಡು ಬಂದಲ್ಲಿ 1500ರೂ.ನಿಂದ 25,000ರೂ.ವರೆಗೆ ದಂಡವನ್ನು ವಿಧಿಸಲಾಗುವುದು ಹಾಗೂ ಪ್ರಕರಣ ದಾಖಲಿಸಲಾಗುವುದು ಎಂದು ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News