ಮಂಗಳೂರು ಸೆಂಟ್ರಲ್ ಮಾರುಕಟ್ಟೆಯಲ್ಲಿ ಅಧಿಕೃತ ಪರವಾನಿಗೆದಾರರಿಗೆ ಮಾತ್ರ ಅವಕಾಶ : ಅಕ್ಷಯ್ ಶ್ರೀಧರ್

Update: 2020-09-30 08:51 GMT

ಮಂಗಳೂರು, ಸೆ.30: ನಗರದ ಸೆಂಟ್ರಲ್ ಮಾರುಕಟ್ಟೆಗೆ ಸಂಬಂಧಿಸಿ ರಾಜ್ಯ ಉಚ್ಛ ನ್ಯಾಯಾಲಯದ ಆದೇಶದಂತೆ ಕಾನೂನುಬದ್ಧ ವ್ಯಾಪಾರ ಪರವಾನಿಗೆ ಹೊಂದಿರುವವರಿಗೆ ವ್ಯಾಪಾರಕ್ಕೆ ಅಕಾಶ ನೀಡಲು ಕ್ರಮ ವಹಿಸಲಾಗಿದೆ ಎಂದು ಮನಪಾ ಆಯುಕ್ತರಾದ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಈಗಾಗಲೇ 100ಕ್ಕೂ ಅಧಿಕ ಮಂದಿ ಪರವಾನಿಗೆ ಹಾಗೂ ಆಧಾರ್ ಕಾರ್ಡ್ ನೀಡಿದ್ದಾರೆ. ಅದರಂತೆ ಅಧಿಕೃತವಾಗಿರುವ 35ರಷ್ಟು ವ್ಯಾಪಾರಿಗಳಿಗೆ ಅಲ್ಲಿ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.

ಟ್ರೇಡ್ ಲೈಸೆನ್ಸ್ ಯಾರ ಹೆಸರಲ್ಲಿದೆಯೋ ಅವರೇ ಅಲ್ಲಿ ವ್ಯಾಪಾರ ನಡೆಸಬೇಕು. ಕೋವಿಡ್ 19ರ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಅದು ಸುರಕ್ಷಿತ ತಾಣವಲ್ಲ ಎಂದು ಪಾಲಿಕೆಯ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೇ ಸೆಂಟ್ರಲ್ ಮಾರುಕಟ್ಟೆಯ ಕಟ್ಟಡವೂ ಸುರಕ್ಷಿತವಲ್ಲ ಎಂದು ಪಾಲಿಕೆಯ ಇಂಜಿನಿಯರ್‌ರವರು ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ನೂತನ ಮಾರುಕಟ್ಟೆ ನಿರ್ಮಾಣದ ಸಂದರ್ಭ ವ್ಯಾಪಾರಿಗೆ ಸೂಕ್ತ ಸ್ಥಳದಲ್ಲಿ ಮಾರುಕಟ್ಟೆ ಒದಗಿಸಲಾಗುವುದು ಎಂದು ಅಕ್ಷಯ್ ಶ್ರೀಧರ್ ತಿಳಿಸಿದರು.

ಪಚ್ಚನಾಡಿ ತ್ಯಾಜ್ಯ ಕುಸಿದ ಜಾಗದಲ್ಲಿದೆ 6 ಲಕ್ಷ ಟನ್ ಕಸ!

ಕಳೆದ ವರ್ಷ ಮಳೆಗಾಲದಲ್ಲಿ ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ನಿಂದ ಪ್ರವಾಹದ ನೀರಿನ ಜತೆ ಮಂದಾರ ಪ್ರದೇಶಕ್ಕೆ ಸುಮಾರು 6 ಲಕ್ಷ ಟನ್ ಕಸ ಕುಸಿತವಾಗಿದ್ದು, ಅದನ್ನು ವಿಲೇ ಮಾಡುವ ಕುರಿತಂತೆ ಸರಕಾರಕ್ಕೆ ಸಲ್ಲಿಸಲಾಗಿರುವ ವರದಿಗೆ ಇನ್ನೂ ಅಂತಿಮ ಆದೇಶ ದೊರಕಿಲ್ಲ. ಬಯೋ ಮೈನಿಂಗ್ ಅಥವಾ ಬಯೋ ರೆಮಿಡೀಸ್ ಮೂಲಕ ಅದನ್ನು ವಿಲೇ ಮಾಡಲು ತಜ್ಞರ ಸಲಹೆಯನ್ನಾಧರಿಸಿ ವರದಿ ನೀಡಲಾಗಿದೆ ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದರು.

ಕೃಷಿ ತೋಟಗಾರಿಕೆ ಪರಿಹಾರ ವಿತರಣೆ ಶೇ. 50ರಷ್ಟು ಪೂರ್ಣ 

ಕಳೆದ ವರ್ಷ ಪ್ರವಾಹದಿಂದ ನಿರ್ವಸಿತರಾಗಿರುವ 27 ಕುಟುಂಬಗಳಲ್ಲಿ ಈಗಾಗಲೇ 19 ಕುಟುಂಬಗಳಿಗೆ ಕೃಷಿ ಹಾಗೂ ತೋಟಗಾರಿಕಾ ಪರಿಹಾರ ವಾಗಿ 2 ಕೋಟಿ ರೂ.ಗಳನ್ನು ನೀಡಲಾಗಿದೆ. ಉಳಿದಂತೆ 16 ಕುಟುಂಬಗಳಲ್ಲಿ 13 ಕುಟಂಬಗಳಿಗೆ ಈ ಬೆಳೆ ಪರಿಹಾರವಾಗಿ 53 ಲಕ್ಷಗಳನ್ನು ವಿತರಿಸಲು ಸಿದ್ಧತೆ ನಡೆಸಲಾಗಿದೆ. ಇನ್ನುಳಿದವರು ದಾಖಲೆ ನೀಡಿಲ್ಲ. ದಾಖಲೆ ನೀಡಿದಾಕ್ಷಣ ಅವರಿಗೂ ವಿತರಿಸಲು ಕ್ರಮ ವಹಿಸಲಾಗುವುದು. ಇನ್ನು ಶಾಶ್ವತ ಪುನರ್ವಸತಿಗೆ ಸಂಬಂಧಿಸಿ ಕೆಲ ಕುಟುಂಬಗಳು ಅಲ್ಲೇ ವಾಸಿಸಲು ಬಯಸಿದ್ದಾರೆ. ಉಳಿದವರಿಗೆ ಮನೆ ಪರಿಹಾರಕ್ಕೆ ಸಂಬಂಧಿಸಿ ಸರಕಾರಕ್ಕೆ ಮನವಿ ನೀಡಲಾಗಿದೆ ಎಂದರು.

ಫುಟ್‌ಪಾತ್ ಅತಿಕ್ರಮಿಸಿದ್ದರೆ ವಾರದೊಳಗೆ ತೆರವುಗೊಳಿಸಿ

ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಹಲವು ಕಡೆಗಳಲ್ಲಿ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಗೂಡಂಗಡಿ ಸೇರಿದಂತೆ ಅಕ್ರಮ ವ್ಯವಸ್ಥೆಗಳನ್ನು ಮಾಡಲಾಗಿದೆ. ಅದನ್ನು ಒಂದು ವಾರದೊಳಗೆ ಸಂಬಂಧಪಟ್ಟವರು ತೆರವುಗೊಳಿಸಬೇಕು. ಅವರು ತೆಗೆಯದಿದ್ದರೆ ಪಾಲಿಕೆ ವತಿಯಿಂದ ಕಾನೂನು ಕ್ರಮ ವಹಿಸಲಾಗುವುದು.

- ದಿವಾಕರ ಪಾಂಡೇಶ್ವರ, ಮೇಯರ್, ಮಂಗಳೂರು ಮಹಾನಗರ ಪಾಲಿಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News