ಕೊರೋನ-ಲಾಕ್‌ಡೌನ್ ಪರಿಣಾಮ : ಸರಕಾರದಿಂದ ಮೊಬೈಲ್ ಟವರ್‌ಗೆ ಹೊಸ ದರ ಸೂಚಿ ಪ್ರಕಟ

Update: 2020-09-30 12:27 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಸೆ.30: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇಶಾದ್ಯಂತ ವಿವಿಧ ಕಂಪೆನಿಗಳು ಆರಂಭಿಸಿರುವ ‘ವರ್ಕ್ ಪ್ರಮ್ ಹೋಮ್’ ವ್ಯವಸ್ಥೆಯನ್ನು ಆಧರಿಸಿ ವಿವಿಧ ಮೊಬೈಲ್ ಕಂಪೆನಿಗಳು ಗ್ರಾಮಾಂತರ ಪ್ರದೇಶದ ಉದ್ಯೋಗಿಗಳನ್ನು ಗಮನದಲ್ಲಿರಿಸಿಕೊಂಡು ಟವರ್ ನಿರ್ಮಾಣಕ್ಕೆ ಮುಂದಾಗಿರುವಂತೆಯೇ ರಾಜ್ಯ ಸರಕಾರವು ಮೊಬೈಲ್ ಟವರ್‌ಗಳಿಗೆ ಹೊಸ ದರ ಸೂಚಿಯನ್ನು ಪ್ರಕಟಿಸಿದೆ. ಇದರಿಂದ ಗ್ರಾಪಂಗಳಿಗೆ ಆದಾಯ ಹೆಚ್ಚಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಹಿಂದೆ ಖಾಸಗಿ ಮೊಬೈಲ್ ಕಂಪೆನಿಗಳು ಅಲ್ಲಲ್ಲಿ ಸರಕಾರ ಅಥವಾ ಸ್ಥಳೀಯಾಡಳಿತ ಪ್ರದೇಶದ ಅನುಮತಿಯಿಲ್ಲದೆ ಟವರ್ ಅಳವಡಿಸುತ್ತಿ ದ್ದವು. ಇದರಿಂದ ಸರಕಾರದ ಬೊಕ್ಕಸಕ್ಕೆ ಅಪಾರ ನಷ್ಟವಾಗುತ್ತಿದ್ದವು. ಇದೀಗ ‘ವರ್ಕ್ ಫ್ರಮ್ ಹೋಮ್’ ಕಲ್ಪನೆ ಸಾಕಾರಗೊಳ್ಳುತ್ತಲೇ ಗ್ರಾಮಾಂತರ ಪ್ರದೇಶದ ಉದ್ಯೋಗಗಳನ್ನು ಗಮನದಲ್ಲಿಟ್ಟುಕೊಂಡ ಮೊಬೈಲ್ ಕಂಪೆನಿಗಳು ಟವರ್ ಅಳವಡಿಸಲು ಮುಂದಾಗಿದೆ. ಎಚ್ಚೆತ್ತ ರಾಜ್ಯ ಸರಕಾರ ಹೊಸ ದರ ಸೂಚಿಯನ್ನು ಪ್ರಕಟಿಸಿ ಮೊಬೈಲ್ ಕಂಪೆನಿಗಳು ಸ್ಥಳೀಯಾಡಳಿತ ಸಂಸ್ಥೆಗಳಿಗೆ (ಗ್ರಾಪಂ, ಪಪಂ, ಪುರಸಭೆ, ನಗರಸಭೆ) ಪಾವತಿಸುವ ಶುಲ್ಕವನ್ನು ಹೆಚ್ಚಿಸಿವೆ. ಆ ಮೂಲಕ ಸರಕಾರದ ಬೊಕ್ಕಸಕ್ಕೆ ಲಾಭ ಮತ್ತು ಅನುಮತಿಯಿಲ್ಲದೆ ಟವರ್ ಹಾಕುವುದಕ್ಕೆ ಕಡಿವಾಣ ಹಾಕಿದೆ.

ರಾಜ್ಯದ ಸುಮಾರು ಐದು ಸಾವಿರದಷ್ಟು ಗ್ರಾಪಂಗಳಲ್ಲಿ ಮೊಬೈಲ್ ಟವರ್ ಹಾಕಲು ಅನುಮತಿ ನೀಡುವ ಕಾರ್ಯಕ್ಕೆ ಮಾತ್ರ ಸೀಮಿತವಾಗಿದ್ದ ಸ್ಥಳೀಯಾಡಳಿತವು ಇನ್ನೀಗ ವಾರ್ಷಿಕವಾಗಿ ಪ್ರತೀ ಟವರ್‌ಗಳಿಗೆ 12 ಸಾವಿರ ರೂ. ತೆರಿಗೆ ವಸೂಲಿ ಮಾಡಬಹುದಾಗಿದೆ. ಜೊತೆಗೆ ಜಾಹೀರಾತು ಹಾಗೂ ಹೋರ್ಡಿಂಗ್‌ಗಳ ಮೇಲೆ ಪ್ರತಿ ಚದರ ಮೀಟರ್‌ಗೆ ತಿಂಗಳಿಗೆ 5 ರೂ. ತೆರಿಗೆ ವಿಧಿಸುವ ಅಧಿಕಾರ ಪಡೆದಿದೆ.
ಮೊಬೈಲ್ ಕಂಪನಿಗಳು ಟವರ್ ನಿರ್ಮಾಣಕ್ಕೆ ಸಲ್ಲಿಸುವ ಅರ್ಜಿಯೊಂದಿಗೆ ಟವರ್‌ನ ನಕ್ಷೆ, ಸೈಟ್ ಪ್ಲಾನ್, ಟವರ್‌ನ ಎತ್ತರ, ಅವಘಡ ಸಂಭವಿಸಿ ದರೆ ಕಂಪನಿಯ ಹೊಣೆಗಾರಿಕೆ ಸಹಿತ ಟವರ್‌ನ ರೇಡಿಯೇಶನ್ ಕುರಿತು ಪೂರ್ಣ ದೃಢೀಕರಣಗೊಂಡ ಪತ್ರವನ್ನು ಲಗತ್ತಿಸಬೇಕಿದೆ. ಇದನ್ನು ಮೀರಿ ಟವರ್ ನಿರ್ಮಿದರೆ ಅದನ್ನು ತೆರವುಗೊಳಿಸುವ ಅಧಿಕಾರ ಕೂಡ ಗ್ರಾಪಂಕೆ ಲಭಿಸಿದೆ.

ರಾಜ್ಯದ ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಮೊಬೈಲ್ ಟವರ್ ನಿರ್ಮಿಸುವ ಕುರಿತು ಸ್ವಷ್ಟವಾದ ನೀತಿ ಜಾರಿಗೊಂಡು ಹಲವು ವರ್ಷಗಳಾ ಗಿದೆ. ಆದರೆ ಅವುಗಳು ಸಮರ್ಪಕವಾಗಿ ಜಾರಿಗೊಂಡಿರಲಿಲ್ಲ. ಟ್ರಾಯ್‌ಯಿಂದ ಅನುಮತಿ ಪಡೆದ ಬಳಿಕ ಸಂಬಂಧಪಟ್ಟ ಜಿಲ್ಲಾಧಿಕಾರಿಯ ಗಮನ ಸೆಳೆದು ಟವರ್ ನಿರ್ಮಿಸಬೇಕು ಎಂಬ ನಿಯಮವಿದ್ದರೂ ಅದು ಜಾರಿಯಾಗುತ್ತಿರಲಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ರವಿ ಬಂಗೇರಾ ಅಭಿಪ್ರಾಯಪಡುತ್ತಾರೆ.

ಈಗಾಗಲೇ ಸರಕಾರದ ಆದೇಶವನ್ನು ಗ್ರಾಪಂಗಳಿಗೆ ತಲುಪಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಗ್ರಾಪಂ ಮಟ್ಟದಲ್ಲಿ ಅನುಮತಿ ಇಲ್ಲದೆ ಟವರ್ ನಿರ್ಮಿಸಿದ್ದರೆ ಅಂತಹವರಿಂದ ತೆರಿಗೆ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ.ಜಿಪಂ ಸಿಇಒ ಡಾ. ಸೆಲ್ವಮಣಿ ಆರ್. ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News