‘ಎಪಿಐ ಡಿಕೆ ಲಹರಿ’ ಇ-ಮ್ಯಾಗಜೀನ್ ಲೋಕಾರ್ಪಣೆ

Update: 2020-09-30 14:18 GMT

ಮಂಗಳೂರು, ಸೆ. 30: ಅಸೋಸಿಯೇಶನ್ ಆಫ್ ಫಿಜಿಶಿಯನ್ಸ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಚಾಪ್ಟರ್ (ಎಪಿಐ ಡಿಕೆ ಚಾಪ್ಟರ್) ನಿಂದ ಅಧಿಕೃತ ಪ್ರಕಟನೆಯಾದ ‘ಎಪಿಐ ಡಿಕೆ ಲಹರಿ’ ವಿದ್ಯುನ್ಮಾನ ನಿಯತಕಾಲಿಕೆಯನ್ನು ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ‘ಜ್ಞಾನ ಕೇಂದ್ರ’ ಸಭಾಂಗಣದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯುಶನ್‌ನ ನಿರ್ದೇಶಕ ರೆವರೆಂಡ್ ಫಾ.ರಿಚಾರ್ಡ್ ಎ. ಕೊಯೆಲ್ಹೊ ಎಪಿಐ ಡಿಕೆ ಲಹರಿಯ ಮೊದಲ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ವಿದ್ಯುನ್ಮಾನ ನಿಯತಕಾಲಿಕೆಯು ‘ವರ್ಚುವಲ್’ ವಿಧಾನದ ಮೂಲಕ ಸಂವಹನ ನಡೆಸುವುದು ಓದುಗರ ನಡು ವಿನ ಅಂತರವನ್ನು ಮುಚ್ಚುತ್ತದೆ. ಈ ಮೂಲಕ ಸದೃಢ ಯುಗಕ್ಕೆ ತಕ್ಕಂತೆ ನಮ್ಮನ್ನು ಅಣಿಯಾಗಿಸುತ್ತದೆ. ಅನುಭವಿ ವೈದ್ಯರು ತಮ್ಮ ವೈದ್ಯ ಕೀಯ ವೃತ್ತಿಯ ಅನುಭವಗಳನ್ನು ಯುವ ವೈದ್ಯರೊಂದಿಗೆ ಹಂಚಿಕೊಳ್ಳುವುದರಿಂದ ವೈದ್ಯಕೀಯ ಕ್ಷೇತ್ರ ಇನ್ನಷ್ಟು ಸದೃಢಗೊಳ್ಳಲಿದೆ. ಇದು ಈ ನಿಯತಕಾಲಿಕೆ ಮೂಲಕ ಸಾಧ್ಯವಾಗಲಿದೆ ಎಂದು ಹೇಳಿದರು.

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಜೆ.ಪಿ. ಆಳ್ವ ಮಾತನಾಡಿ, ಸಾಂಕ್ರಾಮಿಕ ರೋಗಗಳು ಹೊಸ ಮಾರ್ಗದಲ್ಲಿ ಮುನ್ನುಗ್ಗುತ್ತಾ ಇರುತ್ತವೆ. ಇವುಗಳನ್ನು ಸಮರ್ಥವಾಗಿ ತಡೆಗಟ್ಟುವ ಶಕ್ತಿ ವೈದ್ಯರಲ್ಲಿ ಇರಬೇಕು. ನಿಯತಕಾಲಿಕೆಯ ಸಂಪಾದಕೀಯ ತಂಡದ ಕಾರ್ಯವು ಕಷ್ಟ ಕರವಾದರೂ ಭವಿಷ್ಯದಲ್ಲಿ ಅವರ ಪ್ರಯತ್ನ ಬಹಳ ಫಲಪ್ರದವಾಗಲಿದೆ ಎಂದರು.

ಮಂಗಳೂರು ಕೆಎಂಸಿಯ ಪ್ರಾಧ್ಯಾಪಕ ಹಾಗೂ ನಿಯತಕಾಲಿಕೆಯ ಪ್ರಧಾನ ಸಂಪಾದಕ ಡಾ.ಚಕ್ರಪಾಣಿ ಎಂ. ಮಾತನಾಡಿ, ತೀವ್ರ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ವೈದ್ಯರಿಗೆ ಹಲವು ಉಪಕ್ರಮಗಳೊಂದಿಗೆ ಹೊರಬರಲು ವಿದ್ಯುನ್ಮಾನ ವೇದಿಕೆ ಪರಿಚಯಿಸಲಾಗುತ್ತಿದೆ. ನಿಯತ ಕಾಲಿಕೆಯ ತಂಡದ ಪರಿಶ್ರಮದ ಬಗ್ಗೆ ಅವರು ತಿಳಿಸಿದರು. ಎಪಿಐ ಸಂಘಟನೆ ಸ್ಥಾಪನೆಗೊಂಡು 25 ವರ್ಷ ಪೂರೈಸಿದ್ದು, ಅದರ ಎಲ್ಲ ಸಾಧನೆ ಗಳನ್ನು ಎಪಿಐ ವೆಬ್‌ಸೈಟ್‌ನಲ್ಲಿ ವೀಕ್ಷಿಸುವ ಸೌಲಭ್ಯ ಕಲ್ಪಿಸಿದೆ ಎಂದರು.

ಸಾಂಕ್ರಾಮಿಕ ಸೋಂಕು ಬಾಧಿಸಿದಾಗ ಎಲ್ಲರೂ ಸೂಪ್ತಾವಸ್ಥೆಗೆ ಜಾರಿದ್ದರು. ಇಂತಹ ಕಠಿಣ ಸಂದರ್ಭದಲ್ಲೂ ನವಯುಗದ ವಿಧಾನಗಳ ಮೂಲಕ ಸದಸ್ಯರನ್ನು ಒಗ್ಗೂಡಿಸುವ ಕೆಲಸ ಮಾಡಿದ ಡಾ.ವೆಂಕಟೇಶ್ ಮತ್ತು ಅವರ ತಂಡದ ಶ್ರಮ ಅತ್ಯದ್ಭುತ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮೂಡುಬಿದಿರೆಯ ಆಳ್ವಾಸ್ ಮೆಡಿಕಲ್ ಸೆಂಟರ್‌ನ ಹಿರಿಯ ವೈದ್ಯ ಹಾಗೂ ನಿಯತಕಾಲಿಕೆಯ ಕಾರ್ಯನಿರ್ವಾಹಕ ಸಂಪಾದಕ ಡಾ.ಸದಾನಂದ ನಾಯ್ಕಾ ‘ಎಪಿಐ ಡಿಕೆ ಲಹರಿ’ ವಿದ್ಯುನ್ಮಾನ ನಿಯತಕಾಲಿಕೆಯ ಕುರಿತ ಒಳನೋಟವನ್ನು ವಿವರಿಸಿದರು.

ಈ ನಿಯತಕಾಲಿಕೆಯು ವೈದ್ಯರು ತಮ್ಮ ವೃತ್ತಿಯಲ್ಲಿನ ಒತ್ತಡ ನಿರ್ವಹಣೆ ಮತ್ತು ಸಾಹಿತ್ಯ, ಕಲೆ, ಅಕಾಡಮಿಯ ಹವ್ಯಾಸಗಳನ್ನು ವ್ಯಕ್ತಪಡಿಸ ಬಹುದಾದ ವೇದಿಕೆಯಾಗಿದೆ ಎಂದು ನಿಯತಕಾಲಿಕೆಯ ಸದಸ್ಯರಿಗೆ ಮಾಹಿತಿ ನೀಡಿದರು. ನಿಯತಕಾಲಿಕೆ ಮೂಲಕವೇ ವೈದ್ಯಕೀಯ ಕ್ಷೇತ್ರದಲ್ಲಿ ಜ್ಞಾನವನ್ನು ಹಂಚಿಕೊಳ್ಳಬಹುದು. ವೈದ್ಯಕೀಯ ವೃತ್ತಿಯ ಭವಿಷ್ಯದ ವಿವಿಧ ಮಜಲುಗಳಲ್ಲಿ ವಿಕಸನ ಹೊಂದಲು ಸಹಕಾರಿಯಾಗಲಿದೆ.

ಎಪಿಐ ಡಿಕೆ ಚಾಪ್ಟರ್‌ನ ಅಧ್ಯಕ್ಷ ಡಾ.ವೆಂಕಟೇಶ್ ಬಿ.ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಕಾಲೇಜು ಆಸ್ಪತ್ರೆಯ ಮೆಡಿಸಿನ್ ವಿಭಾಗದ ಮುಖ್ಯಸ್ಥೆ ಡಾ.ಅರುಣಾಚಲಂ ಆರ್., ಪ್ರೊ.ಡಾ.ಸ್ಮಿತಾ ಭಟ್, ಡಾ.ಪ್ರಶಾಂತ್ ವೈ.ಎಂ., ಡಾ.ಅಕ್ಷತ್, ಕೆಎಂಸಿಯ ಪ್ರೊ.ಡಾ.ಕ್ರಿಸ್ಟೋಫರ್ ಪಾಯ್ಸೋ ಮತ್ತಿತರರು ಉಪಸ್ಥಿತರಿದ್ದರು.

ಎಪಿಐ ಡಿಕೆ ಚಾಪ್ಟರ್‌ನ ಕಾರ್ಯದರ್ಶಿ ಹಾಗೂ ವಿದ್ಯುನ್ಯಾನ ನಿಯತಕಾಲಿಕೆಯ ನಿರ್ಮಾಣ ವ್ಯವಸ್ಥಾಪಕಿ ಡಾ.ಅರ್ಚನಾ ಭಟ್ ಸ್ವಾಗತಿಸಿದರು. ಚಾಪ್ಟರ್‌ನ ಖಜಾಂಚಿ ಡಾ.ಮುಹಮ್ಮದ್ ಅಶ್ರಫ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News