ಅ.1ರಿಂದ ಬರೋಡಾ ಕಿಸಾನ್ ಪಾಕ್ಷಿಕ

Update: 2020-09-30 14:19 GMT

ಮಂಗಳೂರು, ಸೆ.30: ಭಾರತದ ಮೂರನೇ ಅತಿದೊಡ್ಡ ಸಾರ್ವಜನಿಕ ವಲಯ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾದಿಂದ ‘ಬರೋಡಾ ಕಿಸಾನ್ ಪಾಕ್ಷಿಕ’ದ ಮೂರನೇ ಆವೃತ್ತಿಯನ್ನು ಅ.1ರಿಂದ 16ರವರೆಗೆ ಹಮ್ಮಿಕೊಳ್ಳಲಾಗಿದೆ.

ಆರ್ಥಿಕ ಸುಸ್ಥಿರತೆಗೆ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ರೈತ ಸಮುದಾಯದ ಚೈತನ್ಯ ಮತ್ತು ಸ್ಫೂರ್ತಿಯನ್ನು ಶ್ಲಾಘಿಸುವ ಉದ್ದೇಶದಿಂದ ಇದನ್ನು ಹಮ್ಮಿಕೊಳ್ಳಲಾಗುತ್ತಿದೆ. ಭಾರತ ಸರಕಾರ ಮತ್ತು ಬ್ಯಾಂಕ್ ಒದಗಿಸುವ ಸೇವೆಗಳ ಬಗ್ಗೆ ರೈತ ಸಮುದಾಯಕ್ಕೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ.

ಕಳೆದ ವರ್ಷ 6,11,779 ರೈತರು ಬ್ಯಾಂಕ್ ಆಯೋಜಿಸಿದ್ದ ವಿವಿಧ ವಿಸ್ತರಣಾ ಕಾರ್ಯಕ್ರಮಗಳ ಪ್ರಯೋಜನ ಪಡೆದಿದ್ದರು. ಈ ವರ್ಷ ಕೂಡ ರೈತರ ಪ್ರಯೋಜನಕ್ಕಾಗಿ ಇಂಥದ್ದೇ ಕಾರ್ಯಕ್ರಮಗಳನ್ನು ‘ವರ್ಚುವಲ್’ ವಿಧಾನದ ಮೂಲಕ ಆಯೋಜಿಸಲು ಬ್ಯಾಂಕ್ ನಿರ್ಧರಿಸಿದೆ.

ಈ ವರ್ಷ ಬ್ಯಾಂಕ್ ವಿನೂತನ ‘ಆತ್ಮನಿರ್ಭರ ಭಾರತ’ ಅಭಿಯಾನದ ಬಗ್ಗೆಯೂ ಬ್ಯಾಂಕ್ ಪ್ರಚಾರ ನಡೆಸಲಿದೆ. ಅ.16ನ್ನು (ಪಾಕ್ಷಿಕದ ಕೊನೆಯ ದಿನ) ಬರೋಡಾ ಕಿಸಾನ್ ದಿನವಾಗಿ ಆಚರಿಸಲಾಗುತ್ತದೆ. ಅದೇ ದಿನ ವಿಶ್ವ ಆಹಾರ ದಿನವೂ ಆಗಿರುವುದು ವಿಶೇಷ. ಈ ಬಾರಿ ಆತ್ಮನಿರ್ಭರ ಭಾರತ ಪ್ಯಾಕೇಜ್‌ನ ಯೋಜನೆಗಳ ಬಗ್ಗೆ ಗಮನ ಹರಿಸಲಾಗಿದೆ. ಆದಾಗ್ಯೂ, ಕೊರೋನ ಸೋಂಕು ಹಿನ್ನೆಲೆಯಲ್ಲಿ ವಿಸ್ತರಣಾ ಯೋಜನೆಗಳು ಬಹುತೇಕ ವರ್ಚುವಲ್ ವಿಧಾನದಲ್ಲಿ ಇರುತ್ತವೆ ಎಂದು ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ವಿಕ್ರಮಾದಿತ್ಯ ಸಿಂಗ್ ಪ್ರಕಟನೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News