ಉಡುಪಿ: ಮಾಸ್ಕ್ ಧರಿಸದವರಿಂದ ಡಿಸಿ ನೇತೃತ್ವದಲ್ಲಿ ದಂಡ ವಸೂಲಿ

Update: 2020-09-30 15:47 GMT

ಉಡುಪಿ, ಸೆ. 30: ಮಾಸ್ಕ್ ಧರಿಸಿದವರ ವಿರುದ್ಧ ಕಾರ್ಯಾಚರಣೆಯನ್ನು ಉಡುಪಿ ಜಿಲ್ಲಾಡಳಿತ ತೀವ್ರಗೊಳಿಸಿದ್ದು, ಇಂದು ಸಂಜೆ ನಗರದ ಲಯನ್ಸ್ ಸರ್ಕಲ್ ಬಳಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಉಡುಪಿ ನಗರಸಭೆ ಮತ್ತು ಪೊಲೀಸ್ ಇಲಾಖೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಾಸ್ಕ್ ಧರಿಸಿದವರ ವಿರುದ್ಧ ಕಾನೂನು ಕ್ರಮ ಜರಗಿಸಲಾಯಿತು.

ಮಾಸ್ಕ್ ಧರಿಸದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರಗಿಸುವ ನಿಟ್ಟಿನಲ್ಲಿ ಖುದ್ದು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರೇ ಫೀಲ್ಡ್‌ಗೆ ಇಳಿದು ಈ ಕಾರ್ಯಾಚರಣೆ ಯನ್ನು ಪರಿಶೀಲಿಸಿದರು. ಮಾಸ್ಕ್ ಧರಿಸದ ಪಾದಾಚಾರಿ, ದ್ವಿಚಕ್ರ ವಾಹನ ಸವಾರರು ಹಾಗೂ ವಾಹನ ಸವಾರರಿಂದ ತಲಾ 100ರೂ.ನಂತೆ ಒಟ್ಟು 10ಸಾವಿರ ರೂ. ದಂಡ ವಸೂಲಿ ಮಾಡಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಡಿವೈಎಸ್ಪಿ ಜೈಶಂಕರ್, ನಗರಸಭೆ ಪೌರಾಯುಕ್ತ ಆನಂದ ಕಲ್ಲೋಲಿಕರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೋಹನ್‌ರಾಜ್ ಮೊದಲಾದವರು ಉಪಸ್ಥಿತರಿದ್ದರು.

ಒಟ್ಟು 51500ರೂ. ದಂಡ ವಸೂಲಿ

ಉಡುಪಿ ಜಿಲ್ಲೆಯಲ್ಲಿ ಸೆ.29ರಂದು ಮಾಸ್ಕ್ ಧರಿಸದವರಿಂದ ನಗರಸಭೆ/ಪುರಸಭೆ/ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 1600ರೂ., ಪಂಚಾಯತ್ ವ್ಯಾಪ್ತಿಯಲ್ಲಿ 200ರೂ., ಪೊಲೀಸ್ ಇಲಾಖೆಯಿಂದ 45400ರೂ., ಅಬಕಾರಿ ಇಲಾಖೆಯಿಂದ 1300ರೂ., ಕಂದಾಯ ಇಲಾಖೆಯಿಂದ 3000ರೂ. ಸೇರಿ ದಂತೆ ಒಟ್ಟು 51500ರೂ. ದಂಡ ವಸೂಲಿ ಮಾಡಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 7,55,650 ದಂಡ ವಸೂಲಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News