ಅಕ್ರಮ ಮರಳುಗಾರಿಕೆಗೆ ಕಡಿವಾಣ: ಮರಳು ಸಮಿತಿ ಸಭೆಯಲ್ಲಿ ನಿರ್ಣಯ

Update: 2020-09-30 14:55 GMT

ಮಂಗಳೂರು, ಸೆ.30: ಸಿಆರ್‌ಝಡ್ ವ್ಯಾಪ್ತಿಯ ನದಿಪಾತ್ರಗಳಲ್ಲಿ ಮರಳು ದಿಬ್ಬಗಳನ್ನು ಅನಧಿಕೃತವಾಗಿ ತೆಗೆಯದಂತೆ ಹಾಗೂ ಅಕ್ರಮ ಮರಳುಗಾರಿಕೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮರಳು ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ನೇತೃತ್ವದಲ್ಲಿ ನಡೆದ ಮರಳು ಸಮಿತಿ ಸಭೆಯಲ್ಲಿ ಹಲವು ನಿರ್ಣಯ ಗಳನ್ನು ಕೈಗೊಳ್ಳಲಾಯಿತು. ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ ಮೀನುಗಾರಿಕಾ ದೋಣಿಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡುವ 13 ಮರಳು ದಿಬ್ಬಗಳನ್ನು ತೆರವುಗೊಳಿಸುವ ಸಂಬಂಧ ಮಾರ್ಗಸೂಚಿ ಅನುಸಾರ ಕ್ರಮ ಕೈಗೊಳ್ಳಲಾಗುತ್ತದೆ.

ಸಮಿತಿಯಲ್ಲಿ ಗುರುತಿಸಲಾಗಿರುವ ಅರ್ಹ ಸಾಂಪ್ರದಾಯಿಕ ಮರಳು ಪರವಾನಿಗೆದಾರರು ಉಪ ನಿರ್ದೇಶಕರ ಕಚೇರಿ, ಮಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ 13 ಮರಳು ದಿಬ್ಬಗಳನ್ನು ತೆರವುಗೊಳಿಸಲು ತಾತ್ಕಾಲಿಕ ಅನುಮತಿ ನೀಡುವ ಸಂಬಂಧ ಅ.7ರವರೆಗೆ ಅರ್ಜಿ ಆಹ್ವಾನಿಸಲು ತೀರ್ಮಾನಿಸಲಾಗಿದೆ.

ಪರಿಶೀಲನಾ ಸಮಿತಿ ರಚನೆ: ಮರಳು ದಿಬ್ಬಗಳನ್ನು ತೆರವುಗೊಳಿಸುವ ಸಂಬಂಧ ಸ್ವೀಕೃತವಾಗುವ ಅರ್ಜಿ ಪರಿಶೀಲಿಸಿ ಅರ್ಹ ಸಾಂಪ್ರದಾಯಿಕ ಮರಳು ಪರವಾನಿಗೆದಾರರನ್ನು ಗುರುತಿಸಿ ಶಿಫಾರಸು ಮಾಡಲು ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿ ರಚಿಸಿದೆ. ಈ ಸಮಿತಿ ನಿಯಮಾನುಸಾರ ಮರಳು ದಿಬ್ಬಗಳನ್ನು ತೆರವುಗೊಳಿಸಲು ತಾತ್ಕಾಲಿಕ ಪರವಾನಿಗೆ ನೀಡುವ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಿದೆ.

ನಾನ್ ಸಿಆರ್‌ಝಡ್‌ಗಳಲ್ಲಿ ಹೊಸ ಮರಳು ನೀತಿ- 2020ರನ್ವಯ ಜಂಟಿ ಸ್ಥಳ ಪರಿಶೀಲನೆ ನಡೆಸಿ ಸಲ್ಲಿಸಿರುವ ವರದಿಯನುಸಾರ ತಾಲೂಕು ಮರಳು ಸಮಿತಿ ಸಭೆಗಳ ನಡವಳಿಗಳೊಂದಿಗೆ ಶಿಫಾರಸು ಮಾಡಿರುವ ಮೊದಲನೇ, ಎರಡನೇ ಮತ್ತು ಮೂರನೇ ಶ್ರೇಣಿಯ ಹಳ್ಳ/ತೊರೆಗಳ ಪ್ರದೇಶಗಳಲ್ಲಿ ಗುರುತಿಸಿರುವ ಮರಳು ನಿಕ್ಷೇಪಗಳಿಂದ ಮರಳನ್ನು ತೆಗೆದು ವಿಲೇವಾರಿ ಮಾಡಲು ಸಂಬಂಧಪಟ್ಟ ಗ್ರಾಪಂಗಳಿಗೆ ವಹಿಸಿ ಅಧಿಸೂಚನೆ ಹೊರಡಿಸಲು ಸಮಿತಿ ನಿರ್ಧರಿಸಿದೆ.

ಹೊಸ ಮರಳು ನೀತಿ 2020ರನ್ವಯ ತುಂಬೆ ಡ್ಯಾಂನಲ್ಲಿ ಕುಡಿಯುವ ನೀರಿನ ಶೇಖರಣಾ ಪ್ರಮಾಣ ಹೆಚ್ಚಿಸಲು ಡ್ಯಾಂನ ಹಿನ್ನೀರಿನ ನದಿ ಪಾತ್ರದ ಪ್ರದೇಶದಲ್ಲಿ ಹೂಳಿನಲ್ಲಿ ದೊರಕುವ ಮರಳನ್ನು ತೆಗೆಯಲಾಗುವುದು. ಇದರ ವಿಲೇವಾರಿಯನ್ನು ಬೆಂಗಳೂರಿನ ರಾಜ್ಯ ಸ್ಟೇಟ್ ಮಿನರಲ್ ಕಾರ್ಪೊರೇಶನ್ ಲಿ.ಗೆ (KSMCL) ವಹಿಸಲು ನಿರ್ಣಯಿಸಲಾಗಿದೆ.

ಸದ್ಯ, ಮಹಾನಗರ ಪಾಲಿಕೆಗೆ ನೀಡಿರುವ ಕಾಯಾದೇಶ ರದ್ದುಪಡಿಸಿ, KSMCLನಿಂದ ತುಂಬೆ ಡ್ಯಾಂನ ನದಿ ಪಾತ್ರದ ಪ್ರದೇಶದಲ್ಲಿ ಹೂಳಿನಲ್ಲಿ ಲಭ್ಯವಿರುವ ಮರಳು ತೆಗೆದು ವಿಲೇವಾರಿ ಮಾಡಲಾಗುವುದು. ಮಂಗಳೂರು ತಾಲೂಕಿನ ಅದ್ಯಪಾಡಿ ಗ್ರಾಮ ವ್ಯಾಪ್ತಿಯ ಮರವೂರು ಡ್ಯಾಂ ಹಾಗೂ ಬಂಟ್ವಾಳ ತಾಲೂಕಿನ ನಾವೂರು-ಶಂಭೂರು ಗ್ರಾಮದ ವ್ಯಾಪ್ತಿಯ ‘ಎಎಂಆರ್ ಪವರ್ ಪ್ಲಾಂಟ್ ಡ್ಯಾಮ್’ನ ನದಿ ಪಾತ್ರದ ಪ್ರದೇಶದಲ್ಲಿ ಹೂಳಿನಲ್ಲಿ ಲಭ್ಯವಿರುವ ಮರಳು ತೆಗೆದು ವಿಲೇವಾರಿಗೆ ಸಂಬಂಧಪಟ್ಟ ಇಲಾಖೆಗಳಿಂದ ಹಾಗೂ KSMCLನ ಅಧಿಕಾರಿಗಳೊಂದಿಗೆ ಕೂಡಲೇ ಜಂಟಿ ಸ್ಥಳ ಪರಿಶೀಲನೆ ನಡೆಸುವುದು. ಲಭ್ಯ ಮರಳು ತೆಗೆದು ಜಿಲ್ಲೆಯ ಸಾರ್ವಜನಿಕರಿಗೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಪೂರೈಕೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಣಯಿಸಿದೆ.

ಜಿಲ್ಲೆಯಲ್ಲಿನ ಮರಳನ್ನು ಹೊರ ಜಿಲ್ಲೆಗಳಿಗೆ ಸಾಗಾಟ ತಡೆಗಟ್ಟಲು ಜಿಲ್ಲೆಯ ಗಡಿಭಾಗಗಳಲ್ಲಿ ತನಿಖಾ ಠಾಣೆ ನಿರ್ಮಿಸಲು ಪೊಲೀಸ್, ಕಂದಾಯ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳು ಜಂಟಿಯಾಗಿ ಸ್ಥಳ ಗುರುತಿಸುವುದು. ಜಿಲ್ಲಾ ಮರಳು ಸಮಿತಿ/ ಜಿಲ್ಲಾ ಟಾಸ್ಕ್‌ಫೋರ್ಸ್ (ಗಣಿ) ಸಮಿತಿ ಸಭೆಗೆ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮರಳು ಸಮಿತಿಯ ಅಧ್ಯಕ್ಷ ಡಾ.ಕೆ.ವಿ. ರಾಜೇಂದ್ರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮರಳು ನಿಕ್ಷೇಪಗಳು

ಕಡಬ ತಾಲೂಕಿನ ಪುಣ್ಚಪ್ಪಾಡಿ ಜೋಡು ಕಾಲುವೆಯಲ್ಲಿ ಸ.ನಂ 72/1ಡಿ1 ದಲ್ಲಿ 0.60 ಎಕರೆ ಮರಳು ನಿಕ್ಷೇಪವಿದ್ದು, ಅಂದಾಜು 1,505 ಮೆಟ್ರಿಕ್ ಟನ್ ಲಭ್ಯ.

ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಬದಂತಡ್ಕ ಸೀರೆ ಹೊಳೆ ಹಳ್ಳದಲ್ಲಿ ಸ.ನಂ 114, 129-1ಎ ದಲ್ಲಿ 0.50 ಎಕರೆ ಮರಳು ನಿಕ್ಷೇಪವಿದ್ದು, ಅಂದಾಜು 1,720 ಮೆಟ್ರಿಕ್ ಟನ್ ಮರಳು ಲಭ್ಯ.

ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಕಂದಡ್ಕ ಹೊಳೆಯಲ್ಲಿ ಸ.ನಂ. 181/1ದಲ್ಲಿ 0.50 ಎಕರೆ ಮರಳು ನಿಕ್ಷೇಪವಿದ್ದು, ಅಂದಾಜು 577.92 ಮೆ.ಟನ್ ಮರಳು ಲಭ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News