ಡ್ರಗ್ಸ್ ಪ್ರಕರಣ : ಮತ್ತೊಬ್ಬ ಕೊರಿಯಾಗ್ರಫರ್ ಸೆರೆ

Update: 2020-09-30 16:29 GMT

ಮಂಗಳೂರು, ಸೆ. 30: ಮಂಗಳೂರು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ನೈಜೀರಿಯದ ಪ್ರಜೆಯನ್ನು ಬಂಧಿಸಿರುವ ಬೆನ್ನಲ್ಲೇ ಇನ್ನೊಬ್ಬ ಕೊರಿಯಾಗ್ರಫರ್‌ನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಇದರೊಂದಿಗೆ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾದಂತಾಗಿದೆ.

ಬಂಧಿತ ಕೊರಿಯಾಗ್ರಫರ್ ವಿಚಾರಣೆ ವೇಳೆ ಹಲವು ಕಿರುತೆರೆ ನಟಿಯರು ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದಾನೆ. ಈತ ಸ್ಯಾಂಡಲ್‌ವುಡ್ ಜೊತೆ ನಂಟು ಹೊಂದಿರುವುದನ್ನು ತನಿಖೆಯಲ್ಲಿ ಹೇಳಿದ್ದಾನೆ ಎಂದು ತಿಳಿದುಬಂದಿದೆ.

ಮತ್ತೆ ಅನುಶ್ರೀ ವಿಚಾರಣೆ?: ಮಂಗಳೂರು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಪಾರ್ಟಿಗಳಲ್ಲಿ ಪಾಲ್ಗೊಂಡ ಬಗ್ಗೆ ವಿಚಾರಣೆಗೆ ಹಾಜರಾಗಿದ್ದ ಟಿವಿ ನಿರೂಪಕಿ, ನಟಿ ಅನುಶ್ರೀ ಮತ್ತೆ ವಿಚಾರಣೆ ಎದುರಿಸುವ ಸಂಕಷ್ಟ ಎದುರಾಗಿದೆ.

ಬೆಂಗಳೂರಿನಲ್ಲಿ ಈಗಾಗಲೇ ಮಂಗಳೂರು ಸಿಸಿಬಿ ಪೊಲೀಸರಿಂದ ಬಂಧಿಸಲ್ಪಟ್ಟ ಪ್ರಮುಖ ಡ್ರಗ್ಸ್ ಪೆಡ್ಲರ್, ನೈಜೀರಿಯ ಪ್ರಜೆಯ, ತಾನು ಭಾಗವಹಿಸಿದ ಪಾರ್ಟಿಗಳಲ್ಲಿ ಅನುಶ್ರೀ ಪಾಲ್ಗೊಂಡಿರುವ ಬಗ್ಗೆ ಪೊಲೀಸರಲ್ಲಿ ಬಾಯಿಬಿಟ್ಟಿದ್ದಾನೆ ಎಂದು ಮೂಲಗಳು ಹೇಳಿವೆ. ಇದರಿಂದಾಗಿ ಮತ್ತೆ ಅನುಶ್ರೀ ಪೊಲೀಸರ ವಿಚಾರಣೆಗೆ ಹಾಜರಾಗಬೇಕಾದ ಅನಿವಾರ್ಯತೆ ಬರಬಹುದು ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ.

ಮಂಗಳೂರು ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಪಡ್ಲರ್ ನೈಜೀರಿಯ ಪ್ರಜೆಯನ್ನು ಮೂರು ದಿನಗಳ ಹಿಂದೆ ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ವಿಚಾರಣೆ ವೇಳೆ ಆತನಿಂದ ಡ್ರಗ್ಸ್ ಪೂರೈಕೆ ಹಾಗೂ ಪಾರ್ಟಿ ಆಯೋಜನೆ ಕುರಿತು ಮತ್ತಷ್ಟು ಮಾಹಿತಿಗಳು ಪೊಲೀಸ್ ತಂಡಕ್ಕೆ ಲಭ್ಯವಾಗಿದೆ. ಇದೇ ವೇಳೆ ಅನುಶ್ರೀಯನ್ನು ಪಾರ್ಟಿಯಲ್ಲಿ ನೋಡಿದ್ದಾಗಿ ಆತ ಹೇಳಿರುವುದಾಗಿ ಮೂಲಗಳು ಹೇಳುತ್ತಿವೆ.

ವಾರದ ಹಿಂದೆ ಅನುಶ್ರೀ ಮಂಗಳೂರಿಗೆ ಬಂದಾಗ ಸಿಸಿಬಿ ಪೊಲೀಸರ ವಿಚಾರಣೆ ಎದುರಿಸಿದ್ದಲ್ಲದೆ, ನಗರ ಪೊಲೀಸ್ ಕಮಿಷನರ್ ಅವರನ್ನೂ ಭೇಟಿ ಮಾಡಿದ್ದರು. ಆ ವೇಳೆ, ಅವಶ್ಯವಾದರೆ ಮತ್ತೆ ವಿಚಾರಣೆಗೆ ಕರೆಸುವುದಾಗಿ ಕಮಿಷನರ್ ಹೇಳಿದ್ದರು. ಮಾಧ್ಯಮ ಜೊತೆ ಮಾತನಾಡಿ ದಾಗಲೂ ಅನುಶ್ರೀ, ಮತ್ತೆ ಬೇಕಾದರೆ ತನಿಖೆಗೆ ಹಾಜರಾಗಲು ಸಿದ್ಧವಿರುವುದಾಗಿ ಹೇಳಿದ್ದರು. ಇದೀಗ ನೈಜೀರಿಯನ್ ಪ್ರಜೆ ನೀಡಿರುವ ಹೇಳಿಕೆಯನ್ನು ಆಧರಿಸಿ ಅನುಶ್ರೀಯನ್ನು ಮತ್ತೊಮ್ಮೆ ವಿಚಾರಣೆಗೆ ಕರೆಸಬೇಕೇ ಎನ್ನುವುದು ನಿರ್ಧಾರವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News