ಸರಕಾರ, ಪ್ರಾಸಿಕ್ಯೂಶನ್ ಸೂಕ್ತ ಸಾಕ್ಷ್ಯ ಒದಗಿಸಲು ಸಂಪೂರ್ಣ ವಿಫಲ; ಯು.ಟಿ.ಖಾದರ್

Update: 2020-09-30 17:54 GMT

ಮಂಗಳೂರು : ಭಾರತ ಸಂವಿಧಾನವನ್ನು ನಾವೆಲ್ಲರೂ ಗೌರವಿಸಬೇಕು. ಆದರೆ ಬಾಬರಿ ಮಸೀದಿ ಧ್ವಂಸ ವಿಚಾರದಲ್ಲಿನ ಆರೋಪಿಗಳ ಕುರಿತು ಸರಕಾರ ಮತ್ತು ಪ್ರಾಸಿಕ್ಯೂಶನ್ ಸೂಕ್ತವಾದ ದಾಖಲೆ ಒದಗಿಸುವಲ್ಲಿ ವಿಫಲವಾಗಿದೆ. ಇದು ಸರಕಾರದ ವೈಫಲ್ಯತೆಗೆ ಹಿಡಿದ ಕನ್ನಡಿ. ಬಾಬರಿ ಘಟನೆಗೆ ಇಡೀ ಜಗತ್ತು ಸಾಕ್ಷಿ. ಸುಪ್ರೀಂಕೋರ್ಟ್ ಕೂಡಾ ಇತ್ತೀಚಿನ ತೀರ್ಪಲ್ಲಿ ಬಾಬರಿ ಧ್ವಂಸವು ಅಪರಾಧ ಹಾಗೂ ಖಂಡನಾರ್ಹ ಎಂದು ಹೇಳಿದೆ. ಆದ ಕಾರಣ ಸಂವಿಧಾನಕ್ಕನುಗುಣವಾಗಿ ಸರಕಾರ ಸೂಕ್ತವಾದ ನಿಲುವು ತಾಳಬೇಕು ಎಂದು ರಾಜ್ಯದ ಮಾಜಿ ಸಚಿವರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬುಧವಾರ ವಿಟ್ಲಕ್ಕೆ ಖಾಸಗಿ ಭೇಟಿ ನೀಡಿದ ಸಂದರ್ಭ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.

ಬಾಬರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳನ್ನು ದೋಷಮುಕ್ತಗೊಳಿಸಿರುವ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ಕುರಿತು ಈ ರೀತಿ ಅವರು ಪ್ರತಿಕ್ರಿಯಿಸಿದರು.

ಆರೆಸ್ಸೆಸ್ ಬಿ ಟೀಮ್ ಪತಾಕೆ ಈಗ ಹಾರುತ್ತಿಲ್ಲ;
ಕಾಂಗ್ರೆಸ್ ಅಲ್ಪಸಂಖ್ಯಾತರ ಪರವಾಗಿಲ್ಲ ಎಂಬ ಹೇಳಿಕೆ ಅಸಂಬದ್ಧ. ಆರೆಸ್ಸೆಸ್ ಬಿ ಟೀಮ್ ಇಂತಹ ಆರೋಪ ಮಾಡುತ್ತಿದೆ. ಕಾಂಗ್ರೆಸ್ ಸರಕಾರ ಇರುವಾಗ ರಂಪಾಟ ನಡೆಸುತ್ತಿದ್ದ ಬಿ ಟೀಮ್ ಇಂದು ಬಿಜೆಪಿ ಸರಕಾರ ಬಂದಾಗ ತನ್ನ ಹೋರಾಟದ ಬಾವುಟವನ್ನು ಎಲ್ಲಿಟ್ಟಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತು. ಅವೆಲ್ಲವನ್ನೂ ಈಗ ಬಿಜೆಪಿ ಮತ್ತು ಆರೆಸ್ಸೆಸ್ ಕಚೇರಿಯಲ್ಲಿ ಶೇಖರಿಸಿಟ್ಟಿದ್ದಾರೆ. ಶಾಬಾನು ಪ್ರಕರಣ, ಸಿಎಎ, ಎನ್ ಆರ್ ಸಿ ಬಂದಾಗ ಅದರ ವಿರುದ್ಧ ರಾಜ್ಯಸಭೆ, ವಿಧಾನಸಭೆ, ಸಂಸತ್ ನಲ್ಲಿ ಹೋರಾಟ ಮಾಡಿದ್ದು ಕಾಂಗ್ರೆಸ್. ಆರೆಸ್ಸೆಸ್ ನ ಬಿ ಟೀಮ್ ನ ಬಾವುಟವನ್ನು ಎಲ್ಲಿಯಾದರೂ ನೋಡಿದ್ದೀರಾ ? ಕಾಂಗ್ರೆಸ್ ಮೇಲೆ ಆರೋಪ ಮಾಡುವುದು ಅವರ ಹಿಡನ್ ಅಜೆಂಡಾ. ಕಾಂಗ್ರೆಸ್ ಜನಪರ ಪಕ್ಷ. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಮತ್ತು ಗಾಂಧೀಜಿಯವರ ಕನಸಿನ ಭಾರತದ ತತ್ವವನ್ನು ಕಾಂಗ್ರೆಸ್ ಅಳವಡಿಸಿಕೊಂಡಿದೆ ಎಂದು  ಯು.ಟಿ.ಖಾದರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News