ಮೀನುಗಾರರ ಕಲ್ಯಾಣ ಮಂಡಳಿ ರಚನೆಗೆ ಆಗ್ರಹಿಸಿ ಧರಣಿ

Update: 2020-10-01 12:18 GMT

ಉಡುಪಿ, ಅ.1: ಮೀನು ಕಾರ್ಮಿಕರ ಸಾಮಾಜಿಕ ಭದ್ರತೆ, ಮೀನುಗಾರರಿಗೆ ಕಲ್ಯಾಣ ಮಂಡಳಿ ರಚನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘದ ವತಿಯಿಂದ ಗುರುವಾರ ಉಡುಪಿ ಜಿಲ್ಲಾಧಿಕಾರಿ ಕಚೆೀರಿ ಎದುರು ಧರಣಿ ನಡೆಸಲಾಯಿತು.

ಮಳೆಗಾಲದ ಸಂದರ್ಭ ಸಂಪಾದನೆ ಇಲ್ಲದೇ ಇರುವುದರಿಂದ ಉಚಿತವಾಗಿ ರೇಷನ್ ಜೀವನಾವಶ್ಯಕ ವಸ್ತುಗಳೊಂದಿಗೆ ನೀಡಬೇಕು. ಕಲ್ಯಾಣ ಮಂಡಳಿ ರಚಿಸಿ ಅಪಘಾತ ಸಂಭವಿಸಿದಾಗ ಪರಿಹಾರ, ವಸತಿ, ಮಕ್ಕಳಿಗೆ ವಿದ್ಯಾರ್ಥಿ ವೇತನ, ಹೆಣ್ಣು ಮಕ್ಕಳ ಮದುವೆಗೆ ಸಹಾಯಧನ ಸೌಲಭ್ಯಗಳನ್ನು ನೀಡಬೇಕು.

ಮೀನುಗಾರರಿಗೆ ಮನೆ ನಿವೇಶನ ಹಂಚಲು ಕ್ರಮ ವಹಿಸಬೇಕು. ಕೇರಳ ಮಾದರಿಯಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಿ ಕಡಲ್ಕೊರೆತದಿಂದ ಆಗುವ ಅನಾಹುತ ತಪ್ಪಿಸಬೇಕು. 60ವರ್ಷ ಪ್ರಾಯದ ನಂತರ ತಿಂಗಳಿಗೆ 6000ರೂ. ಪಿಂಚಣಿ ನೀಡಬೇಕು. ಅಪಘಾತ ಸಂಭವಿಸಿದಾಗ 10ಲಕ್ಷ ರೂ. ಪರಿಹಾರ ನೀಡಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲ ಕುಟುಂಬಗಳಿಗೆ ಮಾಸಿಕ 7500ರೂ. ನೆರವು ಆರು ತಿಂಗಳ ಕಾಲ ನೀಡಬೇಕು ಎಂದು ಧರಣಿನಿರತರು ಒತ್ತಾಯಿಸಿದರು.

ಬಳಿಕ ಈ ಕುರಿತ ಮನವಿಯನ್ನು ಅಪಾರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಧರಣಿಯಲ್ಲಿ ಮೀನು ಗಾರರ ಮುಖಂಡರಾದ ಕೆ.ಶಂಕರ್, ಮಹಾಬಲ ವಡೇರಹೋಬಳಿ, ಕವಿರಾಜ್ ಎಸ್.ಕಾಂಚನ್, ಜ್ಯೋತಿ ಮೊಗವೀರ, ಗಣೇಶ ಮೊಗವೀರ, ಉದಯಗಾಣಿಗ ಮೋಗೆರ ಹಾಗೂ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಮುಖಂಡರಾದ ವೆಂಕಟೇಶ್ ಕೋಣಿ, ಗಣೇಶ ತೋಂಡೆಮಕ್ಕಿ, ಉಮೇಶ್, ರಾಮ ಕಾರ್ಕಡ, ನಳಿನಿ, ುಂದರಿ, ಜಗನ್ನಾಥ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News