ಪಡುವರಿ ಜಾತಿ ನಿಂದನೆ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಐಜಿಪಿಗೆ ದಸಂಸ ಮನವಿ

Update: 2020-10-01 12:36 GMT

ಉಡುಪಿ, ಅ.1: ಪಡುವರಿ ಗ್ರಾಪಂ ಅಧ್ಯಕ್ಷರು ಹಾಗು ಪಿಡಿಓ ಸೇರಿ ಪರಿಶಿಷ್ಟ ಜಾತಿಯ ಮಹಿಳೆ ಗೀತಾ ಸುರೇಶ್ ಅವರನ್ನು ಜಾತಿ ನಿಂದನೆ ಮಾಡಿ ಗ್ರಾಪಂ ಕಾರ್ಯಾಲಯದಿಂದ ಹೊರಗಟ್ಟಿರುವ ಪ್ರಕರಣದ ಮರು ತನಿಖೆ ನಡೆಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ನಿಯೋಗ, ಮಂಗಳೂರು ಪಶ್ಚಿಮ ವಲಯ ಐಜಿಪಿಗೆ ಬುಧವಾರ ಮನವಿ ಸಲ್ಲಿಸಿದೆ.

ಮಾ.4ರಂದು ಗೀತಾ ಸುರೇಶ್ ಕುಮಾರ್ ಎಂಬವರನ್ನು ಪಡುವರಿ ಗ್ರಾಪಂ ಅಧ್ಯಕ್ಷೆ ರಾಧಾ ಶೆಟ್ಟಿ ಹಾಗು ಪಿಡಿಓ ಗಣೇಶ್ ಹೆಬ್ಬಾರ್ ಸೇರಿ ಜಾತಿ ನಿಂದನೆ ಮಾಡಿ ಕಾರ್ಯಾಲಯದಿಂದ ಹೊರಗಟ್ಟಿರುವ ಬಗ್ಗೆ ಬೈಂದೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಠಾಣೆಯಲ್ಲಿದ್ದರೂ ಪೊಲೀಸರು ಬಂಧಿಸದೆ ಕರ್ತವ್ಯ ಲೋಪ ಎಸಗಿದ್ದರು ಎಂದು ಮನವಿಯಲ್ಲಿ ದೂರಲಾಗಿದೆ.

ಅದೇ ರೀತಿ ದಲಿತ ದೌರ್ಜನ್ಯದ ಪ್ರಕರಣದ ತನಿಖಾಧಿಕಾರಿಯಾಗಿರುವ ಕುಂದಾಪುರ ಪೋಲಿಸ್ ಉಪಾಧೀಕ್ಷಕರು ಇಡೀ ಪ್ರಕರಣವನ್ನು ಬಿ ವರದಿ ನೀಡಿ ಮುಗಿಸಿದರು. ದಲಿತರ ಮೇಲೆ ದೌರ್ಜನ್ಯ ಆದಾಗ ರಕ್ಷಣೆಗೆ ನಿಲ್ಲಬೇಕಾಗಿದ್ದ ಮೇಲಾಧಿಕಾರಿಗಳೇ ಈಗ ಕರ್ತವ್ಯ ಲೋಪವೆಸಗಿ ದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಮನವಿಗೆ ಸ್ಪಂದಿಸಿದ ಐಜಿಪಿ, ನ್ಯಾಯ ದೊರಕಿಸುವ ಕೊಡುವ ಭರವಸೆಯನ್ನು ನೀಡಿದ್ದಾರೆ.

ನಿಯೋಗದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ಹಾಗು ದಲಿತ ದೌರ್ಜನ್ಯ ಸಮಿತಿ ಸದಸ್ಯ ಮಂಜುನಾಥ ಗಿಳಿಯಾರು, ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು, ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News