ಹತ್ರಸ್ ಸಂತ್ರಸ್ತೆಯ ತಡರಾತ್ರಿ ಅಂತ್ಯಕ್ರಿಯೆಯನ್ನು ವಿರೋಧಿಸಿ, ಪೊಲೀಸರ ಕ್ರಮವನ್ನು ಪ್ರಶ್ನಿಸಿದ ಬಿಜೆಪಿ ಸಂಸದ

Update: 2020-10-01 13:30 GMT

ಹೊಸದಿಲ್ಲಿ: ಹತ್ರಸ್ ಅತ್ಯಾಚಾರ ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ಕುಟುಂಬ ಸದಸ್ಯರ ಅನುಪಸ್ಥಿತಿಯಲ್ಲಿ ಪೊಲೀಸರು ರಾತ್ರೋರಾತ್ರಿ ನಡೆಸಿದ ಕ್ರಮದ ವಿರುದ್ಧ ದೇಶಾದ್ಯಂತ ಆಕ್ರೋಶ ಮೂಡಿರುವಂತೆಯೇ ಇದೀಗ ಸ್ಥಳೀಯ ಬಿಜೆಪಿ ಸಂಸದ ರಾಜ್‍ವೀರ್ ದಿಲೆರ್ ಕೂಡ ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದಾರೆ ಎಂದು theprint.in ವರದಿ ಮಾಡಿದೆ.

ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ಬೆಳಗ್ಗೆ ನಡೆಸುವಂತೆ ತಾವು ಜಿಲ್ಲಾ ಮ್ಯಾಜಿಸ್ಟ್ರೇಟ್‍ಗೆ ಸೂಚಿಸಿದರೂ ಅವರು ತನ್ನ ಮಾತು ಆಲಿಸಿಲ್ಲ ಎಂದು ದಿಲೆರ್ ಹೇಳಿದ್ದಾರೆ.

“ಕಳೆದ ಎರಡು ದಿನಗಳಿಂದ ನಾನು ಸಂತ್ರಸ್ತೆಯ ಕುಟುಂಬ ಸದಸ್ಯರೊಂದಿಗೆ ಅವರ ಗ್ರಾಮದಲ್ಲಿದ್ದೆ. ಅಂತ್ಯಕ್ರಿಯೆಯ ವೇಳೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಎಸ್‍ಪಿ ಇದ್ದರು. ನಾನು ಕೂಡ ಇದ್ದೆ ಆದರೆ ಅಲ್ಲಿ ಗಲಭೆ ನಡೆಯಬಹುದೆಂದು ಹೇಳಿದ ಪೊಲೀಸರು ನನಗೆ ಪೊಲೀಸ್ ಠಾಣೆಗೆ ಹೋಗುವಂತೆ ಸೂಚಿಸಿದರು,'' ಎಂದರು.

ತಡರಾತ್ರಿ ಅಂತ್ಯಕ್ರಿಯೆ ನಡೆಸುವ ನಿರ್ಧಾರವನ್ನು ಯಾರು ಕೈಗೊಂಡರು ಎಂಬ ಪ್ರಶ್ನೆಗೆ ಉತ್ತರಿಸಿದ ಹತ್ರಸ್ ಸಂಸದ, ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಥಳದಲ್ಲಿದ್ದುರಿಂದ ಅವರು ಉದ್ವಿಗ್ನತೆ ಉಂಟಾಗದಂತೆ ನೋಡಿಕೊಳ್ಳಲು ಇಂತಹ ನಿರ್ಧಾರ ಕೈಗೊಂಡಿರಬಹುದು ಎಂದಿದ್ದಾರೆ.

“ಜಿಲ್ಲಾ ಮ್ಯಾಜಿಸ್ಟ್ರೇಟ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ.  ಯುವತಿಯ ಕುಟುಂಬಕ್ಕೆ ನ್ಯಾಯ ಒದಗಿಸದೇ ಇದ್ದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಅವರ ವಾಲ್ಮೀಕಿ ಸಮುದಾಯಕ್ಕೆ ಭರವಸೆ ನೀಡಿದ್ದೇನೆ,'' ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News