ಕೆಎಂಸಿಯಲ್ಲಿ ಅಪರೂಪದ ರಕ್ತದಾನಿಗಳ ನೋಂದಣಿ ಲೋಕಾರ್ಪಣೆ

Update: 2020-10-01 14:19 GMT

ಉಡುಪಿ, ಅ.1: ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಿನವಾದ ಅ.1ರಂದು ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆಯಲ್ಲಿ ಅಪರೂಪದ ರಕ್ತದಾನಿಗಳ ನೋಂದಣಿ ಯನ್ನು ಲೋಕಾರ್ಪಣೆಗೊಳಿಸಲಾಯಿತು.

ರಕ್ತಪೂರಣ ವಿಜ್ಞಾನಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಡಾ.ಜೈಗೋಪಾಲ್ ಜಾಲಿ ಅವರ ಜನ್ಮದಿನವನ್ನು ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಿನವಾಗಿ ಆಚರಿಸಲಾಗುತ್ತಿದೆ. ಅಪರೂಪದ ರಕ್ತದಾನಿಗಳ ನೋಂದಣಿಗೆ ಚಾಲನೆ ನೀಡಿ ಮಾತನಾಡಿದ ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್ ಕ್ಯಾ. ಡಾ.ಎಂ.ಡಿ. ವೆಂಕಟೇಶ್,ಅಪರೂಪದ ರಕ್ತ ಹೊಂದಿರುವ ರೋಗಿಗಳ ಜೀವ ಉಳಿಸುವಲ್ಲಿ ಈ ನೋಂದಣಿ ಉಪಯುಕ್ತವಾಗಲಿದೆ ಎಂದರು.

ಅಪರೂಪದ ರಕ್ತದ ದಾನಿಗಳನ್ನು ಗುರುತಿಸಿ, ಅವರ ಮೂಲಕ ರಕ್ತ ಪೂರೈಕೆ ಮಾಡಲು ಭಾರಿ ಪ್ರಯತ್ನ ಮಾಡಬೇಕಾಗುತ್ತದೆ. ಈ ಅಪರೂಪದ ರಕ್ತದಾನಿಗಳ ನೋಂದಣಿ ದಾಖಲೀಕರಣ ಕಾರ್ಯಕ್ರಮ ದಕ್ಷಿಣಭಾರತದಲ್ಲೇ ಮೊದಲನೆ ಯದಾಗಿದೆ ಎಂದರು.

ಇದೇ ವೇಳೆ ಮಾತನಾಡಿದ ಜಮ್‌ಶೆಡ್‌ಪುರದ ಮಣಿಪಾಲ್-ಟಾಟಾ ವೈದ್ಯಕೀಯ ಕಾಲೇಜಿನ ಡೀನ್ ಡಾ.ಪೂರ್ಣಿಮಾ ಬಾಳಿಗಾ, ಈ ಉಪಕ್ರಮವು ಸಾಂಧರ್ಭಿಕವಾಗಿದ್ದು, ಅಪರೂಪದ ರಕ್ತದ ಫಿನೋಟೈಪ್ ಹೊಂದಿರುವ ರೋಗಿಗಳಿಗೆ ರಕ್ತ ಪೂರೈಕೆಯ ಸಮಯವನ್ನು ಕಡಿಮೆ ಮಾಡುತ್ತದೆ ಎಂದರು.

ಕೆಎಂಸಿ ಮಣಿಪಾಲದ ಡೀನ್ ಡಾ.ಶರತ್ ರಾವ್ ಮಾತನಾಡಿದರು. ರಕ್ತ ವರ್ಗಾವಣೆ ಔಷಧ ಕ್ಷೇತ್ರದ ಪ್ರಮುಖ ಸೂರತ್‌ನ ಲೋಕ ಸಮರಪನ್ ಪ್ರಾದೇಶಿಕ ರಕ್ತ ಕೇಂದ್ರದ ಖ್ಯಾತ ವಿಜ್ಞಾನಿ, ನಿರ್ದೇಶಕ ಡಾ.ಸನ್ಮುಕ್ ಜೋಶಿ, ಲಕ್ನೋದ ಎಸ್‌ಜಿಪಿಜಿಐಎಂನ ಡಾ.ರಾಜೇಂದ್ರ ಚೌಧರಿ, ಇಂಡಿಯನ್ ಸೊಸೈಟಿ ಆಫ್ ಟ್ರಾನ್ಸ್‌ಫ್ಯೂಷನ್ ಮೆಡಿಸಿನ್ ಅಧ್ಯಕ್ಷ ಡಾ. ದೇಬಶಿಶ್ ಗುಪ್ತಾ ಉಪಸ್ಥಿತರಿದ್ದರು.

ಮಣಿಪಾಲ ಕಸ್ತೂರ್‌ಬಾ ಆಸ್ಪತ್ರೆ ರಕ್ತ ಕೇಂದ್ರದ ಮುಖ್ಯಸ್ಥ ಡಾ. ಶಮೀ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, 1000 ಜನರಲ್ಲಿ 1ಕ್ಕಿಂತ ಕಡಿಮೆಯಿದ್ದರೆ ರಕ್ತದ ಗುಂಪು ಅಪರೂಪ ಎಂದು ಹೇಳಲಾಗುತ್ತದೆ. ಪ್ರಾದೇಶಿಕ ಅಪರೂಪದ ದಾನಿಗಳ ನೋಂದಾವಣೆಯನ್ನು ಅಭಿವೃದ್ಧಿಪಡಿ ಸಲು, ನಾವು ಉಡುಪಿ ಜಿಲ್ಲೆಯ ‘ಓ’ ರಕ್ತ ಗುಂಪು ಹೊಂದಿರುವ ಸ್ವಯಂಸೇವಕ ದಾನಿಗಳನ್ನು ಆಯ್ಕೆ ಮಾಡಿದ್ದೇವೆ. ಪ್ರಾಯೋಗಿಕವಾಗಿ ಮಹತ್ವದ್ದಾಗಿರುವ 23 ವಿಧದ ಕೆಂಪುರಕ್ತ ಕಣ ಪ್ರತಿಜನಕ ಗಳನ್ನು ಪರೀಕ್ಷಿಸಿದ್ದೇವೆ. ಪ್ರಸ್ತುತ ನಾವು 26 ಅಪರೂಪದ ರಕ್ತದ ಫಿನೋಟೈಪ್ ಗಳನ್ನು ಹೊಂದಿರುವ ಮತ್ತು 40 ಅಪರೂಪದ ರಕ್ತದಾನಿಗಳ ವಿವವನ್ನು ಹೊಂದಿದ್ದೇವೆ ಎಂದು ಹೇಳಿದರು.

ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಮಾಹೆ ಸಹ ಉಪಕುಲಪತಿ ಡಾ. ಪಿಎಲ್ಏನ್ ಜಿ ರಾವ್, ಕೆಎಂಸಿಯ ಮುಖ್ಯ ನಿರ್ವಹಣಾ ಧಿಕಾರಿ ಸಿ.ಜಿ.ಮುತ್ತಣ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News