ಯುವತಿಯ ಅತ್ಯಾಚಾರ, ಕೊಲೆ ಖಂಡಿಸಿ ಉಡುಪಿಯಲ್ಲಿ ಪ್ರತಿಭಟನೆ: ಆದಿತ್ಯನಾಥ್ ಪ್ರತಿಕೃತಿಯ ಅಣಕು ಶವಯಾತ್ರೆ ನಡೆಸಿ ಆಕ್ರೋಶ

Update: 2020-10-01 14:57 GMT

ಉಡುಪಿ, ಅ.1: ಉತ್ತರ ಪ್ರದೇಶದ ಹತ್ರಾಸ್ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಲೇ ರಾಜೀನಾಮೆ ನೀಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ನೇತೃತ್ವದಲ್ಲಿ ಯೋಗಿ ಆದಿತ್ಯನಾಥ್ ಪ್ರತಿಕೃತಿಯ ಅಣಕು ಶವಯಾತ್ರೆ ನಡೆಸಿ ಪ್ರತಿಭಟಿಸಲಾಯಿತು.

ಗುರುವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಆದಿತ್ಯನಾಥ್ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ, ಶವಯಾತ್ರೆಯ ಅಣಕು ಪ್ರದರ್ಶನ ನಡೆಸಲಾಯಿತು. ಇದೇ ವೇಳೆ ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆಯುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು. ದಲಿತ ದೌರ್ಜನ್ಯ ಕಾಯಿದೆಯನ್ನು ಬಲಿಷ್ಠಗೊಳಿಸುವಂತೆ ಮತ್ತು ಕೋಮುವಾದಿ ಉತ್ತರ ಪ್ರದೇಶದ ಸರಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಲಾಯಿತು.

ನಂತರ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಚಿಂತಕ, ಹೋರಾಟಗಾರ ಹರ್ಷಕುಮಾರ್ ಕುಗ್ವೆ, ಜನಾಂಗೀಯ ಜಾತೀಯತೆಯ ಸಿದ್ಧಾಂತವನ್ನು ಪ್ರತಿಪಾದಿಸುವವರು ಅಧಿಕಾರ ನಡೆಸುತ್ತಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡದಿದ್ದರೆ ಮುಂದೆ ಪ್ರತಿ ಹಳ್ಳಿಗಳು ಕೂಡ ಹತ್ರಾಸ್ ಆಗಬಹುದಾಗಿದೆ ಎಂದು ಎಚ್ಚರಿಸಿದರು.

ಸಂತ್ರಸ್ತೆಯ ಮೃತದೇಹವನ್ನು ಮರು ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶ ನೀಡದ ರೀತಿಯಲ್ಲಿ ಬಲವಂತವಾಗಿ ಅಂತ್ಯಕ್ರಿಯೆ ನಡೆಸಲಾಯಿತು. ಇದೀಗ ಯುವತಿಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಪ್ರತಿಪಾದಿಸು ತ್ತಿದ್ದಾರೆ. ಇದರ ವಿರುದ್ಧ ಕಣ್ಣೀರು ಕೂಡ ಕಿಡಿಗಳಾಗುವ ರೀತಿಯಲ್ಲಿ ನಾವ್ಲೆ ಹೋರಾಟ ಮಾಡಬೇಕಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ಹೇಡಿ ಮುಖ್ಯಮಂತ್ರಿ ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಎಂಬುದೇ ಇಲ್ಲ. ಈ ಬಗ್ಗೆ ಮೋದಿ ತುಟಿ ಬಿಚ್ಚುತ್ತಿಲ್ಲ. ಅಧಿಕಾರ ದಲ್ಲಿರುವ ಕೇವಲ ಆರೆಸ್ಸೆಸ್ ಸಿದ್ಧಾಂತವನ್ನು ಜಾರಿಗೆ ತರುವ ಕೆಲಸ ಮಾಡುತ್ತಿ ದ್ದಾರೆ. ಇಂದು ಹಿಂದುತ್ವವಾದಿಗಳು, ಸಂಘಪರಿವಾರ, ಸಂಸದೆ ಶೋಭಾ, ಬಿಜೆಪಿ ಮುಖಂಡರು ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ಧ್ವನಿ ಎತ್ತದೆ ಮೌನ ವಹಿಸಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಮಾತನಾಡಿ, ಎಲ್ಲಿಯವರೆಗೆ ಈ ದೇಶದ ನಡೆಯುವ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಹೋರಾಟ ನಡೆಸುವ ವರ್ಗ ಇಲ್ಲದಿದ್ದರೆ, ಇಂತಹ ಅನ್ಯಾಯ ಇನ್ನಷ್ಟು ಮುಂದುವರೆಯುತ್ತಿರುತ್ತದೆ. ನಮ್ಮ ದೇಶದಲ್ಲಿ ಇಂದು ಮೇಲ್ಜಾತಿಯವರಿಗೆ ಒಂದು ನ್ಯಾಯ, ದುರ್ಬಲರಿಗೆ ಒಂದು ನ್ಯಾಯ ಮತ್ತು ಶ್ರೀಮಂತರಿಗೆ ಒಂದು ನ್ಯಾಯ, ಬಡವರಿಗೆ ಒಂದು ನ್ಯಾಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ನ್ಯಾಯದ ವಿಚಾರದಲ್ಲಿ ಈ ರೀತಿ ತಾರತಮ್ಯ ತೋರುವ ಸಮಾಜ ಎಂದಿಗೂ ಉದ್ಧಾರ ಆಗಲ್ಲ ಎಂದರು.

ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ, ದಸಂಸ ಸಂಘಟನಾ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ, ದಲಿತ ಮುಖಂಡರಾದ ಎಸ್.ಎಸ್.ಪ್ರಸಾದ್, ಮಂಜುನಾಥ ಬಾಳ್ಕುದ್ರು, ಸುಂದರಿ ಪುತ್ತೂರು, ಯುವರಾಜ್, ಚಿಂತಕ ಪ್ರೊ.ಫಣಿರಾಜ್, ಕಾಂಗ್ರೆಸ್ ಮುಖಂಡ ಜನಾರ್ದನ್ ಭಂಡಾರ್ಕರ್, ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ, ಅಲ್ಪಸಂಖ್ಯಾತರ ವೇದಿಕೆಯ ಚಾರ್ಲ್ಸ್ ಆ್ಯಂಬ್ಲರ್, ಸಲಾವುದ್ದೀನ್, ಕೆಆರ್‌ಎಸ್ ಪಕ್ಷದ ವಿನುತಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News