ಯುಎಇ, ಅಮೆರಿಕ ಸಹಿತ 16 ರಾಷ್ಟ್ರಗಳಿಗೆ ವಿಮಾನಯಾನಕ್ಕೆ ಭಾರತೀಯರಿಗೆ ಅವಕಾಶ

Update: 2020-10-01 16:03 GMT

ಹೊಸದಿಲ್ಲಿ, ಅ.1: ಅನ್‌ಲಾಕ್ 5.0 ಅನ್ನು ಪ್ರಕಟಿಸಿರುವ ಸರಕಾರವು ಅ.31ರವರೆಗೆ ನಿಗದಿತ ಅಂತರ್ ರಾಷ್ಟ್ರೀಯ ವಿಮಾನಯಾನಗಳ ಮೇಲಿನ ನಿಷೇಧವನ್ನು ಮುಂದುವರಿಸಿದೆ. ದೇಶದಲ್ಲಿ ಮಾಮೂಲು ಚಟುವಟಿಕೆಗಳು ಹಂತಹಂತವಾಗಿ ಪುನರಾರಂಭಗೊಂಡಿದ್ದರೂ ನಿಗದಿತ ಅಂತರರಾಷ್ಟ್ರೀಯ ವಿಮಾನ ಸಂಚಾರದ ಮೇಲಿನ ನಿರ್ಬಂಧ ಈಗಲೂ ಮುಂದುವರಿದಿದೆ. ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಯಲು ಇತರ ರಾಷ್ಟ್ರಗಳು ವಿಮಾನ ಸಂಚಾರವನ್ನು ನಿಷೇಧಿಸಿರುವ ಕ್ರಮಗಳೂ ಈ ನಿರ್ಬಂಧ ಮುಂದುವರಿಯುವಂತೆ ಮಾಡಿವೆ. ಆದರೆ ಹಲವಾರು ವಿಷಯಗಳು ಅ.1ರಿಂದ ಪರಿಣಾಮಕಾರಿ ಬದಲಾವಣೆಗಳನ್ನು ಕಂಡಿದ್ದು,ಕೆಲವು ದೇಶಗಳಿಗೆ ಭಾರತೀಯರು ಈಗ ವಿಮಾನಪ್ರಯಾಣಗಳನ್ನು ಕೈಗೊಳ್ಳಬಹುದು..

ಭಾರತವು 16 ರಾಷ್ಟ್ರಗಳೊಂದಿಗೆ ಹೊಸ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಂಡಿರುವುದರಿಂದ ಭಾರತೀಯರು ಈಗ ಈ ದೇಶಗಳಿಗೆ ವಿಮಾನಯಾನವನ್ನು ಕೈಗೊಳ್ಳಬಹುದು. ಅಫ್ಘಾನಿಸ್ತಾನ, ಬಹರೈನ್, ಭೂತಾನ್, ಕೆನಡಾ, ಫ್ರಾನ್ಸ್, ಜರ್ಮನಿ, ಇರಾಕ್, ಜಪಾನ್, ಕೆನ್ಯಾ, ಮಾಲ್ದೀವ್ಸ್, ನೈಜೀರಿಯಾ, ಒಮಾನ್, ಖತರ್, ಯುಎಇ, ಬ್ರಿಟನ್ ಮತ್ತು ಅಮೆರಿಕ ಈ ಪಟ್ಟಿಯಲ್ಲಿರುವ ರಾಷ್ಟ್ರಗಳಾಗಿವೆ. ಈ ಒಪ್ಪಂದಗಳು ಸದ್ಯಕ್ಕೆ ಅಂತರರಾಷ್ಟ್ರೀಯ ವಿಮಾನ ಸಂಚಾರಕ್ಕೆ ಅವಕಾಶವನ್ನು ಕಲ್ಪಿಸಿರುವ ಏಕೈಕ ಗವಾಕ್ಷಿಗಳಾಗಿವೆ. ಒಪ್ಪಂದಗಳಡಿ ಉಭಯ ದೇಶಗಳು ಪ್ರಯಾಣಿಕರನ್ನು ಸಾಗಿಸಬಹುದು.

ಆದರೆ ವಾರದ ಆರಂಭದಲ್ಲಿ ಜರ್ಮನಿಯೊಂದಿಗೆ ಉಂಟಾಗಿರುವ ತಕರಾರು ಪ್ರಯಾಣಿಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಜರ್ಮನಿಯ ಲುಫ್ತಾನ್ಸಾ ತನ್ನ ಅಕ್ಟೋಬರ್ ಯಾನಗಳ ನಿಗದಿತ ಪಟ್ಟಿಯಲ್ಲಿ ಜರ್ಮನಿಯಿಂದ ಭಾರತಕ್ಕೆ ಹೆಚ್ಚು ವಿಮಾನಯಾನಗಳಿಗೆ ಅವಕಾಶ ನೀಡಿ ತನ್ನ ದೇಶವನ್ನು ಪ್ರವೇಶಿಸುವ ಭಾರತೀಯ ವಿಮಾನಗಳ ಯಾನಗಳ ಸಂಖ್ಯೆಯನ್ನು ನಿರ್ಬಂಧಿಸಿದ್ದು,ಇದನ್ನು ಭಾರತವು ತಿರಸ್ಕರಿಸಿದೆ. ಇದಕ್ಕೆ ಪ್ರತಿಯಾಗಿ ಲುಫ್ತಾನ್ಸಾ ಭಾರತಕ್ಕೆ ತನ್ನ ಎಲ್ಲ ಯಾನಗಳನ್ನು ಅಕ್ಟೋಬರ್‌ವರೆಗೆ ಅಮಾನತುಗೊಳಿಸಿದೆ. ಈ ಸಂಬಂಧ ಮಾತುಕತೆಗಳು ಈಗ ನಡೆಯುತ್ತಿವೆ.

ಇನ್ನೊಂದೆಡೆ ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ವಿದೇಶಗಳಲ್ಲಿ ಅತಂತ್ರರಾಗಿರುವ ಭಾರತೀಯರನ್ನು ಸ್ವದೇಶಕ್ಕೆ ಮರಳಿ ಕರೆತರಲು ಮೇ ಮೊದಲ ವಾರದಲ್ಲಿ ಆರಂಭಗೊಂಡಿದ್ದ ವಂದೇಭಾರತ ಅಭಿಯಾನ ಈಗಲೂ ಮುಂದುವರಿದಿದೆ. ವಂದೇ ಭಾರತದಲ್ಲಿ ಈಗ ಹೆಚ್ಚು ಯಾನಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಅಕ್ಟೋಬರ್‌ನಲ್ಲಿ ಮಂಗಳೂರಿನಿಂದ ದುಬೈಗೆ ನೇರ ಹಾರಾಟವನ್ನು ಆರಂಭಿಸಲಿದೆ.

ಇದೇ ವೇಳೆ ವಿಮಾನಯಾನ ಸಂಸ್ಥೆಗಳು ಕೋವಿಡ್‌ಗೆ ಮೊದಲಿನ ಲಗೇಜ್ ನಿಯಮಾವಳಿಗಳಿಗೆ ಮರಳಲು ಸರಕಾರವು ಅನುಮತಿಯನ್ನು ನೀಡಿದೆ. ಹೀಗಾಗಿ ಈ ತಿಂಗಳು ಪ್ರಯಾಣಿಕರು ಹೆಚ್ಚು ಲಗೇಜ್ ಒಯ್ಯಲು ಸಾಧ್ಯವಾಗಲಿದೆ. ಏರ್‌ಇಂಡಿಯಾದ ವಿಮಾನಗಳಲ್ಲಿ ಬಿಸಿನೆಸ್ ಕ್ಲಾಸ್ ಪ್ರಯಾಣಿಕರು 35 ಕೆಜಿ ಮತ್ತು ಇಕಾನಮಿ ಕ್ಲಾಸ್ ಪ್ರಯಾಣಿಕರು 25 ಕೆಜಿ ಲಗೇಜ್‌ನ್ನು ತಮ್ಮ ಜೊತೆಗೆ ಸಾಗಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News