ಹಿರಿಯ ಕಾಂಗ್ರೆಸ್ ಮುಖಂಡ ಉಮೇಶ್ ಚಂದ್ರ ನುಡಿ ನಮನ, ಸಂತಾಪ ಸಭೆ

Update: 2020-10-01 17:25 GMT

ಮಂಗಳೂರು, ಅ.1: ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಹಾಗೂ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಎಐಸಿಸಿ ಕಾರ್ಮಿಕ ಘಟಕದ ಮಾಜಿ ಅಧ್ಯಕ್ಷ ಜೆ.ಉಮೇಶ್ ಚಂದ್ರ ಅವರಿಗೆ ನುಡಿ ನಮನ ಸಂತಾಪ ಸಭೆಯು ನಗರದ ಜೆಪ್ಪು ಕಾಸ್ಸಿಯಾ ಚರ್ಚ್ ಹಾಲ್‌ನಲ್ಲಿ ಗುರುವಾರ ಸಂಜೆ ನಡೆಯಿತು.

ಸಂತಾಪ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ದಿ. ಉಮೇಶ್ ಚಂದ್ರ ಕಟ್ಟಾ ಕಾಂಗ್ರೆಸ್ ಸೇನಾನಿಯಾಗಿದ್ದರು. ವಿದ್ಯಾರ್ಥಿ ಕಾಂಗ್ರೆಸ್, ಯುವ ಕಾಂಗ್ರೆಸ್ ಮತ್ತು ಕಾರ್ಮಿಕ ವಲಯಗಳಲ್ಲಿ ಅಸಾಧಾರಣ ಸೇವೆಗೈದ ಪ್ರಾಮಾಣಿಕ ವ್ಯಕ್ತಿ. ಕಾರ್ಮಿಕ ವಿಚಾರದಲ್ಲಿ ಅಚಲವಾದ ಶಕ್ತಿ ಅವರದು ಎಂದರು.

ಮಾಜಿ ಶಾಸಕ ಜೆ. ಆರ್. ಲೋಬೊ ಮಾತನಾಡಿ, ದಿ.ಉಮೇಶ್ ಚಂದ್ರ ಪಕ್ಷದ ರಾಷ್ಟ್ರ ಮಟ್ಟದ ನಾಯಕರಾದರೂ ಚುನಾವಣೆ ಬಂದಾಗ ಬೂತ್ ಮಟ್ಟದಲ್ಲಿ ಮನೆಮನೆಗೆ ತೆರಳಿ ಪ್ರಚಾರ ಮಾಡುವಂತಹ ವ್ಯಕ್ತಿ. ಕಾರ್ಯಕರ್ತರಿಗೆ ಬಹಳಷ್ಟು ಸ್ಫೂರ್ತಿಯಾಗಿದ್ದರು. ಅವರೊಬ್ಬ ನಿಷ್ಕಳಂಕ ನಾಯಕರಾಗಿ ಪಕ್ಷ ಸೇವೆ ಮಾಡಿರುವುದು ಚಿರಸ್ಮರಣೀಯ ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಹರೀಶ್‌ಕುಮಾರ್ ಮಾತನಾಡಿ, ದಿ.ಉಮೇಶ್ ಚಂದ್ರ ಪಕ್ಷದ ಅತ್ಯಂತ ನಿಸ್ವಾರ್ಥ ಸೇವಕ. ತನ್ನ ಜೀವನದಲ್ಲಿ ಸಿದ್ಧಾಂತಗಳನ್ನು ಅಳವಡಿಸಿದ ವ್ಯಕ್ತಿ. ಕಾಂಗ್ರೆಸ್ ಪಕ್ಷದಲ್ಲಿ ರಾಷ್ಟ್ರ ಮಟ್ಟದಲ್ಲಿ ದುಡಿದ ವ್ಯಕ್ತಿ. ಅವರ ನಿಧನ ಪಕ್ಷಕ್ಕೆ, ಸಮಾಜಕ್ಕೆ ನಷ್ಟವಾಗಿದೆ ಎಂದರು.

ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮಾತನಾಡಿ, ಓರ್ವ ಕಾರ್ಮಿಕ ಮುಖಂಡರಾಗಿ ಸಮಾಜದ, ಪಕ್ಷದ ಎಲ್ಲ ಸ್ತರಗಳಲ್ಲಿ ಕೆಲಸ ಮಾಡಿ ಜನರ ಹೃದಯ ಗೆದ್ದಂತಹ ನಾಯಕ ದಿ. ಉಮೇಶ್ ಚಂದ್ರ. ಕಾರ್ಮಿಕ ಜನರ ಕಲ್ಯಾಣಕ್ಕಾಗಿ ಅವರು ಮಾಡಿದ ಕೆಲಸ ಎಲ್ಲರಿಗೂ ಮಾದರಿ ಎಂದರು.

ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ, ಕಳ್ಳಿಗೆ ತಾರಾನಾಥ್ ಶೆಟ್ಟಿ, ಅಬ್ದುಲ್ ಸಲೀಂ, ಪಿ. ವಿ. ಮೋಹನ್, ಮನೋಹರ್ ಶೆಟ್ಟಿ, ಸದಾಶಿವ ಉಳ್ಳಾಲ್, ರೋಶನಿ ನಿಲಯ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ.ಜೆಸಿಂತಾ, ಡಾ.ಕಿಶೋರ್, ಪ್ರೊ.ರಮೀಳಾ ಶೇಖರ್, ಸದಾಶಿವ ಶೆಟ್ಟಿ ಮೊದಲಾದವರು ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಿಥುನ್ ರೈ, ಶಾಲೆಟ್ ಪಿಂಟೋ, ವಿಶ್ವಾಸ್‌ಕುಮಾರ್ ದಾಸ್, ಪ್ರಭಾಕರ್ ಶ್ರೀಯಾನ್, ಸುರೇಶ್ ಶೆಟ್ಟಿ, ಪ್ರೇಮ್ ಚಂದ್, ಪ್ರವೀಣ್ ಆಳ್ವ, ಟಿ.ಕೆ. ಸುಧೀರ್, ಶುಭೋದಯ ಆಳ್ವ, ಕೇಶವ ಮರೋಳಿ, ಅಶ್ರಫ್ ಬಜಾಲ್, ಡೆನಿಸ್ ಡಿಸಿಲ್ವ, ಜೆಸಿಂತಾ ಆಲ್ಫ್ರೆಡ್, ನಮಿತಾ ರಾವ್, ಶಾಂತಲಾ ಗಟ್ಟಿ, ಹೊನ್ನಯ್ಯ, ಸದಾಶಿವ ಅಮೀನ್, ಸುನಿಲ್ ಕುಮಾರ್, ದಿನಕರ್ ಶೆಟ್ಟಿ, ಹರ್ಬಟ್ ಡಿಸೋಜ, ಸುಧಾಕರ್, ದುರ್ಗಾಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News