ಕೊರೋನ ವೈರಸ್: ಸೆಪ್ಟಂಬರ್ ತಿಂಗಳೊಂದರಲ್ಲೇ ಒಟ್ಟು ಪ್ರಕರಣದ ಶೇ. 41.53 ದಾಖಲು

Update: 2020-10-01 18:06 GMT

ಹೊಸದಿಲ್ಲಿ, ಅ. 1: ದೇಶದಲ್ಲಿ ದಾಖಲಾದ 63 ಲಕ್ಷ ಕೊರೋನ ಸೋಂಕಿನ ಪ್ರಕರಣಗಳಲ್ಲಿ 26,21,418 ಸೋಂಕಿನ ಪ್ರಕರಣಗಳು ಸೆಪ್ಟಂಬರ್ ತಿಂಗಳೊಂದರಲ್ಲೇ ದಾಖಲಾಗಿದೆ. ಇದು ಒಟ್ಟು ಪ್ರಕರಣಗಳ ಶೇ. 41.53.

ಕೊರೋನ ಸೋಂಕಿನಿಂದ ಕಳೆದ ತಿಂಗಳು 33,390 ಮಂದಿ ಮೃತಪಟ್ಟಿದ್ದಾರೆ. ಇದು ಇದುವರೆಗೆ ಸಂಭವಿಸಿದ ಒಟ್ಟು 98,678 ಸಾವಿನ ಸಂಖ್ಯೆಯ ಸುಮಾರು ಶೇ. 33.84.

ಸೆಪ್ಟಂಬರ್‌ನಲ್ಲಿ 24,33,319 ಮಂದಿ ಕೊರೋನ ಸೋಂಕಿತರು ಗುಣಮುಖರಾಗುವುದರೊಂದಿಗೆ ದೇಶದಲ್ಲಿ ಇದುವರೆಗೆ ಕೊರೋನ ಸೋಂಕಿನಿಂದ ಒಟ್ಟು ಗುಣಮುಖರಾದವರ ಸಂಖ್ಯೆ 52,73,201ಕ್ಕೆ ಏರಿಕೆಯಾಗಿದೆ. ಸೆಪ್ಟಂಬರ್‌ನಲ್ಲಿ ಗುಣಮುಖರಾದವರ ಸಂಖ್ಯೆ ಒಟ್ಟು ಗುಣಮುಖರಾದವರ ಸಂಖ್ಯೆಯ ಶೇ. 46.15.

ಕೊರೋನ ಸೋಂಕಿತರು ಗುಣಮುಖರಾಗುವ ಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಅನಂತರ ಸ್ಥಾನದಲ್ಲಿ ಬ್ರೆಝಿಲ್ ಹಾಗೂ ಅಮೆರಿಕ ಇದೆ ಎಂದು ಜೋನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯ ಹೇಳಿದೆ.

ಜಗತ್ತಿನಲ್ಲಿ ಅತ್ಯಧಿಕ ಕೊರೋನ ಸೋಂಕಿಗೆ ಒಳಗಾದ ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಅಮೆರಿಕ ಇದೆ. ಆದರೆ, ಸಾವಿನ ಸಂಖ್ಯೆಯಲ್ಲಿ ಭಾರತ ಜಗತ್ತಿನಲ್ಲೇ ಅಮೆರಿಕ ಹಾಗೂ ಬ್ರೆಝಿಲ್‌ನ ನಂತರ ಮೂರನೇ ಸ್ಥಾನದಲ್ಲಿದೆ.

ಭಾರತದಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಆಗಸ್ಟ್ 7ರಂದು 20 ಲಕ್ಷ, ಆಗಸ್ಟ್ 23ರಂದು 30 ಲಕ್ಷ, ಸೆಪ್ಟಂಬರ್ 5ರಂದು 40 ಲಕ್ಷ ದಾಟಿತ್ತು. ಸೆಪ್ಟಂಬರ್ 16ರಂದು 50 ಲಕ್ಷ ಹಾಗೂ ಸೆಪ್ಟಂಬರ್ 28ರಂದು 60 ಲಕ್ಷ ದಾಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News