ಹಾರಾಡಿ ವೃದ್ಧೆಯ ಕೊಲೆ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ

Update: 2020-10-01 17:33 GMT

ಪುತ್ತೂರು: ಕಳೆದ 4 ವರ್ಷಗಳ ಹಿಂದೆ ಪುತ್ತೂರು ನಗರದ ಹಾರಾಡಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಒಂಟಿ ವೃದ್ಧ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷೆನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಹಾರಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವಿನೋದಿನಿ(77) ಎಂಬವರನ್ನು 2016 ಡಿಸೆಂಬರ್ 29ರಂದು ಕೈಕಾಲು, ಮುಖವನ್ನು ಬಟ್ಟೆಯಿಂದ ಕಟ್ಟಿ ಕೊಲೆ ನಡೆಸಿ ಅವರ ಕುತ್ತಿಗೆ ಮತ್ತು ಕಿವಿಯಲ್ಲಿದ್ದ ಸುಮಾರು ರೂ. 50 ಸಾವಿರ ಮೌಲ್ಯದ 30 ಗ್ರಾಂ ಚಿನ್ನಾಭರಣವನ್ನು ದೋಚಲಾಗಿತ್ತು.

ವಿನೋದಿನಿ ಅವರ ಪುತ್ರಿ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಬಳಿಕ ನಡೆದ ಬೆಳವಣಿಗೆಯಲ್ಲಿ ಕೊಲೆ ಆರೋಪಿ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮಿತ್ತನಡ್ಕ ನಿವಾಸಿ ಲಕ್ಷ್ಮಣ ನಾಯ್ಕ ಎಂಬಾತನನ್ನು ಪುತ್ತೂರು ಕೆಸ್ಸಾರ್ಟಿಸಿ ಬಸ್ಸು ನಿಲ್ದಾಣದ ಬಳಿ ಬಂಧಿಸಲಾಗಿತ್ತು. ತನಿಖೆ ವೇಳೆಗೆ ಆತ ತಾನು ಕೊಲೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದ. ಆತನಿಂದ ಚಿನ್ನಾಭರಣ ಹಾಗೂ ಕೊಲೆ ನಡೆಸಲು ಬಳಸಿದ ಕತ್ತಿಯನ್ನು ವಶಪಡಿಸಿಕೊಳ್ಳಲಾಗಿತ್ತು ಹಾಗೂ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಐದನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಅವರು ಅರೋಪಿ ಲಕ್ಷ್ಮಣ ನಾಯ್ಕ ಅವರ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ ಹಾಗೂ ಅಪರಾಧಿಗೆ 10 ವರ್ಷದ ಜೈಲು ಶಿಕ್ಷೆ ಮತ್ತು ರೂ. 10 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ದರೋಡೆ ಅಪರಾಧಕ್ಕಾಗಿ 10 ವರ್ಷ ಜೈಲು ಶಿಕ್ಷೆ ಮತ್ತು ರೂ. 10 ಸಾವಿರ ದಂಡ ವಿಧಿಸಲಾಗಿದೆ. ಎರಡೂ ಅಪರಾಧಗಳಿಗೆ ಸಂಬಂಧಿಸಿ ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 4 ತಿಂಗಳ ಸೆರೆಮನೆವಾಸ ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ದಂಡದ ಹಣದಲ್ಲಿ ರೂ. 15 ಸಾವಿರವನ್ನು ಮೃತರ ಪುತ್ರಿ ಮೈತ್ರಿ ನಾಯಕ್ ಅವರಿಗೆ ನೀಡುವಂತೆಯೂ ಅದೇಶದಲ್ಲಿ ತಿಳಿಸಲಾಗಿದೆ.

ಪ್ರಾಸಿಕ್ಯೂಶನ್ ಪರವಾಗಿ ಸರಕಾರಿ ಅಭಿಯೋಜಕರಾದ ಕೃಷ್ಣವೇಣಿ ವಾದಿಸಿದ್ದರು. ಕೊಲೆ ಆರೋಪದಲ್ಲಿ ಬಂಧಿತನಾಗಿರುವ ಲಕ್ಷ್ಮಣ ನಾಯ್ಕ ಚಿಕ್ಕಮಗಳೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News