×
Ad

ನಾಗರಿಕ ಸಮಾಜದ ಉಳಿವಿನಲ್ಲಿ ನದಿಗಳ ಪಾತ್ರ ಮುಖ್ಯ: ಉಡುಪಿ ಜಿಲ್ಲಾಧಿಕಾರಿ

Update: 2020-10-02 17:40 IST

ಉಡುಪಿ, ಅ.2: ನಾಗರಿಕ ಸಮಾಜದ ಉಳಿವಿನಲ್ಲಿ ನದಿಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಸ್ವರ್ಣಾ ನದಿ ಉಡುಪಿ ಜಿಲ್ಲೆಯ ಜೀವನದಿಯಾಗಿ ಗುರುತಿಸಿಕೊಂಡಿದೆ. ಆದುದರಿಂದ ಅದನ್ನು ಉಳಿಸುವ ಕೆಲಸಕ್ಕೆ ಎಲ್ಲರೂ ಮುಂದಾಗಬೇಕಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಪರ್ಯಾವರಣ ಸಂರಕ್ಷಣಾ ಗತಿವಿಧಿ, ಸಂವೇದನಾ ಫೌಂಡೇಶನ್ ಉಡುಪಿ ಮತ್ತು ಸ್ವಚ್ಛ ಭಾರತ್ ಫ್ರೆಂಡ್ಸ್ ಸಹಯೋಗದಲ್ಲಿ ಶುಕ್ರವಾರ ಸ್ವರ್ಣಾ ನದಿ ತೀರದ ಶೀಂಬ್ರ ಶ್ರೀಸಿದ್ಧಿವಿನಾಯಕ ದೇವಸ್ಥಾನದ ಬಳಿ ಆಯೋಜಿಸಲಾಗಿದ್ದ ‘ಸ್ವರ್ಣಾರಾಧನಾ’ ಕಾರ್ಯಕ್ರಮಕ್ಕೆ ಚಾಲೆ ನೀಡಿ ಅವರು ಮಾತನಾಡುತಿದ್ದರು.

ಜಿಲ್ಲೆಯಲ್ಲಿ ಸ್ವರ್ಣಾ ನೀರನ್ನು ಅತ್ಯಧಿಕ ಪ್ರಮಾಣದಲ್ಲಿ ಬಳಸಲಾಗುತ್ತದೆ. ಉಡುಪಿ ನಗರ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಿಗೆ ಇದು ಕುಡಿಯುವ ನೀರಿನ ಮೂಲವಾಗಿದೆ. ಕಲುಷಿತಗೊಂಡಿದ್ದ ಜಲಮೂಲಗಳು ಇತ್ತೀಚೆಗೆ ಬಂದ ನೆರೆಯಿಂದ ಸಂಪೂರ್ಣ ಶುದ್ಧಗೊಂಡಿವೆ.

ಸ್ವಚ್ಛತೆಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಈಗ ನಮ್ಮೆಲ್ಲರ ಮೇಲಿದೆ. ನದಿ ತೀರದಲ್ಲಿ ಹೆಚ್ಚೆಚ್ಚು ಗಿಡಮರಗಳನ್ನು ನೆಡುವ ಮೂಲಕ ನದಿಯನ್ನು ಉಳಿಸುವ ಜೊತೆಗೆ ಜೀವವೈವಿಧ್ಯತೆಯನ್ನು ಪೋಷಿಸಬಹುದು ಎಂದರು.

ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಉಡುಪಿಯ ಇಂದ್ರಾಣಿ ನದಿ ಕಲುಷಿತಗೊಂಡಿದೆ. ನಗರದಲ್ಲಿ ಹರಿಯುವ ಇಂದ್ರಾಣಿ ಶುದ್ಧವಾಗಿದ್ದರೆ ಮಾತ್ರ ನಗರದ ಜನರ ಆರೋಗ್ಯ ಚೆನ್ನಾಗಿರುತ್ತದೆ. ಈ ನಿಟ್ಟಿನಲ್ಲಿ ಸುಮಾರು 400 ಕೋಟಿ ರೂ.ವೆಚ್ಚದ ಒಳಚರಂಡಿ ವ್ಯವಸ್ಥೆ ಗಾಗಿ ಡಿಪಿಆರ್‌ನ್ನು ಸಿದ್ಧಪಡಿಸಲಾಗಿದೆ ಎಂದವರು ಹೇಳಿದರು.

ಎಂಐಟಿಯ ಪ್ರಾಧ್ಯಾಪಕ ಡಾ.ನಾರಾಯಣ ಶೆಣೈ ಮಾತನಾಡಿ, ಸ್ವರ್ಣಾ ನದಿ ಪಾತ್ರದ 60 ಕಿ.ಮೀ.ವ್ಯಾಪ್ತಿಯಲ್ಲಿ ಗಿಡಗಳನ್ನು ಬೆಳೆಸುವ ಯೋಜನೆ ಹಮ್ಮಿ ಕೊಳ್ಳಲಾಗಿದೆ. ಈ ನದಿ ಕೊಡಂಗಳ ಗುಡ್ಡದಲ್ಲಿ ಹುಟ್ಟಿ ಕೋಡಿಬೆಂಗ್ರೆ ಹಂಗಾರಕಟ್ಟೆಯಲ್ಲಿ ಸಮುದ್ರ ಸೇರುತ್ತದೆ. ಇದರ ವಿಸ್ತೀರ್ಣ 603 ಚದರ ಕಿ.ಮೀ. ಇದೆ. ವಾರ್ಷಿಕ ಸರಾಸರಿ 3,600 ಮಿ.ಮೀ. ಮಳೆಯಾಗುತ್ತದೆ. ಸ್ವರ್ಣಾವನ್ನು ಉಳಿಸುವ ನಿಟ್ಟಿನಲ್ಲಿ ಸ್ವರ್ಣಾರಾಧನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದು ಎಪ್ರಿಲ್ 13ರವರೆಗೆ ನಿರಂತರವಾಗಿ ನಡೆಯಲಿದೆ ಎಂದರು.

ಸ್ವರ್ಣಾ ನದಿಗೆ ಜಿಲ್ಲಾಧಿಕಾರಿಗಳು ಆರತಿ ಬೆಳಗಿ, ಸನಿಹದಲ್ಲಿ ಸಸಿಯನ್ನು ನೆಟ್ಟರು. ಬಳಿಕ ನದಿ ತೀರದಲ್ಲಿ ವಿವಿಧ ಜಾತಿಯ ಹಣ್ಣುಹಂಪಲು ಹಾಗೂ ಔಷಧೀಯ ಸಸಿಗಳನ್ನು ನೆಡಲಾಯಿತು.

ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದ ಟ್ರಸ್ಟಿ ರಮೇಶ್ ರಾವ್, ಅಜಿತ್ ಪೈ, ಕೃಷ್ಣಮೂರ್ತಿ ಶಿವತ್ತಾಯ, ಶಶಾಂಕ ಶಿವತ್ತಾಯ ಉಪಸ್ಥಿತರಿದ್ದರು. ಸಂವೇದನಾ ಫೌಂಡೇಶನ್ ಪ್ರಕಾಶ ಮಲ್ಪೆ ಕಾರ್ಯಕ್ರಮ ನಿರ್ವಹಿಸಿದರು, ರಾಘವೇಂದ್ರ ಪ್ರಭು ಸ್ವಾಗತಿಸಿದರೆ, ಗಣೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News