ಉತ್ತರ ಪ್ರದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಅಪಾಯದಲ್ಲಿ: ರಮಾನಾಥ ರೈ
ಮಂಗಳೂರು, ಅ.2: ಉತ್ತರ ಪ್ರದೇಶದಲ್ಲಿ ಹಾಲಿ ಸರಕಾರ ಅಧಿಕಾರದ ಅವಧಿಯಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆೆ. ಇಂತಹ ಅಪಾಯಕಾರಿ ಬೆಳವಣಿಗೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಬಿ.ರಮಾನಾಥ ರೈ ಹೇಳಿದ್ದಾರೆ.
ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದ ಹಾಥರಸ್‌ನಲ್ಲಿ ದೌರ್ಜನ್ಯಕ್ಕೀಡಾದ ಯುವತಿ ಕೊನೆಯುಸಿರಿನ ಸಂದರ್ಭ ನೀಡಿದ ಹೇಳಿಕೆಗೆ ತದ್ವಿರುದ್ಧವಾದ ಉನ್ನತ ಪೊಲೀಸ್ ಅಧಿಕಾರಿಯ ಹೇಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಥರಸ್‌ನಲ್ಲಿ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ-ಹತ್ಯೆ ಪ್ರಕರಣದಲ್ಲಿ ಹಾಗೂ ಬಳಿಕ ಮೃತ ದೇಹವನ್ನು ಕುಟುಂಬದವರನ್ನು ಬಲವಂತವಾಗಿ ಹೊರಗಿಟ್ಟು ಪೊಲೀಸರೇ ಸುಟ್ಟು ಹಾಕಿದ ಅವಮಾನಕಾರಿ ಹಾಗೂ ಭಯಾನಕ ಘಟನೆಯ ಹಿನ್ನೆಯಲ್ಲಿ ಯೋಗಿ ಆದಿತ್ಯನಾಥ ರವರ ನೇತೃತ್ವದ ಸರಕಾರ ತಕ್ಷಣ ರಾಜೀನಾಮೆ ನೀಡಬೇಕಿತ್ತು. ಆದರೆ ಸರಕಾರ ಆರೋಪಿಗಳ ಪರ ನಿಂತು ನಿಂತಿದೆ. ಸಂತ್ರಸ್ತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಲು ತೆರಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ತಡೆದು ಬಂಧಿಸಿರುವುದು ಸೇರಿದಂತೆ ಒಟ್ಟು ಆಡಳಿತ ನಿರ್ವಹಣೆಯನ್ನು ಗಮನಿಸಿದಾಗ ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಅನಿವಾರ್ಯ ಎಂದು ರೈ ಅಭಿಪ್ರಾಯಿಸಿದರು.
ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಸುದ್ದಿವಾಹಿನಿಗಳನ್ನು ಬಂದ್ ಮಾಡಿಸುತ್ತಿರುವುದು ಖಂಡನೀಯ ಎಂದು ರಮಾನಾಥ ರೈ ಹೇಳಿದರು.
ಜಿಲ್ಲಾದ್ಯಂತ ಕಾಂಗ್ರೆಸ್‌ನಿಂದ ಪ್ರತಿಭಟನೆ:
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ತಡೆದು ಅವರನ್ನು ಕಾನೂನುಬಾಹಿರವಾಗಿ ಬಂಧಿಸಿರುವುದು ಹಾಗೂ ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಬರ್ಬರ ಹತ್ಯೆಯನ್ನು ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವಿವಿಧೆಡೆ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.
ಶಾಸಕ ಯು.ಟಿ.ಖಾದರ್ ಮಾತನಾಡಿ, ಉತ್ತರ ಪ್ರದೇಶದ ಬಿಜೆಪಿ ನೇತೃತ್ವದ ಸರಕಾರ ದ್ವೇಷದ ರಾಜಕಾರಣದಲ್ಲಿ ತೊಡಗಿದೆ. ದಲಿತರ, ಮಹಿಳೆಯರ ಹಕ್ಕುಗಳಿಗೆ ರಕ್ಷಣೆ ಇಲ್ಲದಂತೆ ಮಾಡಿದೆ.ಗೌರವಯುತವಾಗಿ ಮೃತದೇಹಕ್ಕೆ ಅಂತ್ಯ ಸಂಸ್ಕಾರ ಮಾಡುವುದನ್ನು ಬಿಟ್ಟು ಅವಮಾನ ಮಾಡಿದೆ. ಇದನ್ನು ಜನ ಎಷ್ಟುದಿನ ಸಹಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಸದಾಶಿವ ಉಳ್ಳಾಲ್, ದೀಪಕ್ ಪುಜಾರಿ, ಸಂತೋಷ್ ಶೆಟ್ಟಿ, ಟಿ.ಕೆ.ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.