ದೊರೈಸ್ವಾಮಿ ಕುರಿತ ‘ಮಹಾನ್ ತಾತ’ ಸಾಕ್ಷಚಿತ್ರ ಬಿಡುಗಡೆ
ಉಡುಪಿ, ಅ.2: ಉಡುಪಿ ಸಹಬಾಳ್ವೆ ವತಿಯಿಂದ ಗಾಂಧಿ ಮಾರ್ಗಿ ಹೋರಾಟಗಾರ ದೊರೈಸ್ವಾಮಿ ಅವರ ಕುರಿತು ದೀಪು ರಚಿಸಿದ ಅಪೂರ್ವ ಸ್ವಾತಂತ್ರ ಸೇನಾನಿಯ ಸಂಘರ್ಷಗಾಥೆ ‘ಮಹಾನ್ ತಾತ’ ಸಾಕ್ಷಚಿತ್ರವನ್ನು ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ಉಡುಪಿ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್‌ನಲ್ಲಿ ಶುಕ್ರವಾರ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಗಾಂಧಿ ಹೋರಾಟವನ್ನು ಅನುಮಾನಿಸಿ, ಗೋಡ್ಸೆಯನ್ನು ಪೂಜಿಸುವವರು ಇಂದು ನಮ್ಮ ಮಧ್ಯೆ ಇದ್ದಾರೆ. ಅದೇ ರೀತಿ ದೊರೈಸ್ವಾಮಿ ಬಗ್ಗೆಯೂ ಅಪಪ್ರಚಾರ ಮಾಡಲಾಗುತ್ತಿದೆ. ಇಂದಿನ ಈ ಪರಿಸ್ಥಿತಿ ನೋಡುವಾಗ ಬೇಸರ ಆಗುತ್ತದೆ ಎಂದರು.
ಗಾಂಧೀಜಿ ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಡುವುದರ ಜೊತೆಗೆ ಈ ದೇಶದಲ್ಲಿದ್ದ ಅಸ್ಪಶ್ಯತೆ, ಅಸಮಾನತೆ ಹಾಗೂ ಶೋಷಣೆ ವಿರುದ್ಧ ಕೂಡ ಹೋರಾಟ ನಡೆಸಿದ್ದರು. ಅದೇ ಮಾರ್ಗದಲ್ಲಿ ದೊರೈಸ್ವಾಮಿ ಕೂಡ ಸಾಗಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮುಖಂಡ ಶ್ಯಾಮ್‌ರಾಜ್ ಬಿರ್ತಿ, ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಯಾಸೀನ್ ಮಲ್ಪೆ ಉಪಸ್ಥಿತರಿದ್ದರು. ಚಿಂತಕ ಪ್ರೊ.ಫಣಿರಾಜ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.