ಹತ್ರಸ್ ಅತ್ಯಾಚಾರ, ಅಮಾನವೀಯ ಅಂತ್ಯಸಂಸ್ಕಾರ ಖಂಡಿಸಿ ಡಿವೈಎಫ್ಐನಿಂದ ಪ್ರತಿಭಟನೆ

Update: 2020-10-02 16:23 GMT

ದೇರಳಕಟ್ಟೆ : ಉತ್ತರ ಪ್ರದೇಶದ ಹತ್ರಸ್ ಎಂಬಲ್ಲಿ ದಲಿತ ಯುವತಿಯ ಮೇಲೆ ನಡೆದ ಮನುಷ್ಯತ್ವ ತಲೆತಗ್ಗಿಸುವಂತಹ ಅತ್ಯಾಚಾರ , ಕೊಲೆ ಮತ್ತು ಉತ್ತರ ಪ್ರದೇಶದ ಪೊಲೀಸರು ನಡೆಸಿದ ಅಮಾನವೀಯ ಅಂತ್ಯಸಂಸ್ಕಾರದ ಕ್ರಮವನ್ನು ಖಂಡಿಸಿ ಡಿವೈಎಫ್ಐ ಉಳ್ಳಾಲ ವಲಯ ಸಮಿತಿಯ ವತಿಯಿಂದ ಇಂದು ದೇರಳಕಟ್ಟೆ ಜಂಕ್ಷನ್ ನಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ ದೇಶದಲ್ಲಿ ನಂಬರ್ ಒನ್ ರಾಜ್ಯ ಎಂದು ಬಿಜೆಪಿ ಬೆಂಬಲಿಗರು ಹೇಳಿಕೊಳ್ಳುತ್ತಿರುವ ಉತ್ತರ ಪ್ರದೇಶದಲ್ಲಿ 2019 ರಲ್ಲಿ 59853 ಅತ್ಯಾಚಾರ ಪ್ರಕರಣಗಳು ಮತ್ತು 7444 ಮಕ್ಕಳ ಮೇಲಿನ ಲೈಂಗಿಕ ಅಪರಾಧ ಸಂಬಂಧ ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಇದು ಒಂದು ರಾಜ್ಯದಲ್ಲಿ ಆಡಳಿತ ಮತ್ತು ಕಾನೂನು ಸುವ್ಯವಸ್ಥೆ ಕುಸಿದಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದ್ದು ರಾಷ್ಟ್ರಪತಿಗಳು ಈ ದೇಶದ ಮಹಿಳೆ ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಯೋಗಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಲು ಮುಂದಾಗಬೇಕು ಎಂದು ಒತ್ತಾಯಿಸಿದರು. 

ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ಮುಖಂಡ ಅಡ್ವಕೇಟ್ ನಿತಿನ್ ಕುತ್ತಾರ್ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಇದೇ ರೀತಿ ಭಗತ್ ಸಿಂಗ್, ಸುಖ್ ದೇವ್ ಮತ್ತು ರಾಜ್ ಗುರು ಅವರ ಪ್ರಾರ್ಥಿವ ಶರೀರಗಳನ್ನು ಕುಟುಂಬದವರಿಗೆ ಕೊಡದೇ ಜೈಲಿನ ಹಿಂಬಾಗಿಲಿನಿಂದ ಹೊರತೆಗೆದುಕೊಂಡು ಹೋಗಿ ಹೊಲದಲ್ಲಿ ದಹಿಸಿದ್ದರು. ಇಂದು ಯೋಗಿಯ ಪೊಲೀಸರು ಅದೇ ರೀತಿ ದಲಿತ ಬಾಲಕಿ ಮನೀಷಾ ಅವರ ಪ್ರಾರ್ಥಿವ ಶರೀರವನ್ನು ಕುಟುಂಬದವರಿಗೆ ಕೊಡದೇ ಅಮಾನವೀಯವಾಗಿ ದಹಿಸಿರುವುದು ಬ್ರಿಟೀಷ್ ದಬ್ಬಾಳಿಕೆಯ ಮನಸ್ಥಿತಿ ಇನ್ನೂ ಯೋಗಿ ರಾಜ್ಯದ ಪೊಲೀಸರಲ್ಲಿ ಜೀವಂತವಿರುವುದರ ಸಂಕೇತ ಎಂದರು.

ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಮುಖಂಡ ರಫೀಕ್ ಹರೇಕಳ, ಕಾರ್ಯದರ್ಶಿ ಸುನಿಲ್ ತೇವುಲ, ಜೀವನ್ ರಾಜ್ ಕುತ್ತಾರ್, ಅಶ್ರಫ್ ಹರೇಕಳ, ರಝಾಕ್ ಮೊಂಟೆಪದವು, ಸಂತೋಷ್ ಶೆಟ್ಟಿ ಪಿಲಾರ್, ಜನವಾದಿ ಮಹಿಳಾ ಸಂಘಟನೆಯ ಪದ್ಮಾವತಿ ಶೆಟ್ಟಿ, ವಿಲಾಸಿನಿ ತೊಕ್ಕೊಟ್ಟು, ದಲಿತ ಹಕ್ಕುಗಳ ಸಮಿತಿಯ ನಾರಾಯಣ ತಲಪಾಡಿ , ಸಿಪಿಐಎಂ ಮುಖಂಡ ಮಹಾಬಲ ದೆಪ್ಪಲಿಮಾರ್, ಕಟ್ಟಡ ಕಾರ್ಮಿಕರ ಸಂಘದ ಜನಾರ್ದನ್ ಕುತ್ತಾರ್ , ರೋಹಿ ಭಟ್ನಗರ, ಜಯಂತ್ ನಾಯ್ಕ್ , ಇಬ್ರಾಹಿಂ ಮದಕ, ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಕಾರ್ಯದರ್ಶಿ ಜಗದೀಶ್ ನಾಯ್ಕ್, ಡಿವೈಎಫ್ಐ ಮುಡಿಪು ಘಟಕದ ಅಧ್ಯಕ್ಷ ರಝಾಕ್ ಮುಡಿಪು, ದೇರಳಕಟ್ಟೆ ಘಟಕದ ಅಧ್ಯಕ್ಷ ನವಾಜ್ ಉರುಮಣೆ, ಕುತ್ತಾರ್ ಘಟಕದ ಸಂಕೇತ್ ಕಂಪ, ಕಾರ್ತಿಕ್, ಸುರೇಶ್ ತಳನೀರು, ಅಕ್ಷಿತ್ ಕುತ್ತಾರ್, ಭರತ್ ಕುತ್ತಾರ್, ಕರುಣಾಕರ ಕಂಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News