ಕಡಬ: ಜಾನುವಾರುಗಳ ಹಿಂಸಾತ್ಮಕ ಸಾಗಾಟ : ಆರು ಮಂದಿ ಆರೋಪಿಗಳು ಸೆರೆ

Update: 2020-10-02 16:57 GMT

ಕಡಬ, ಅ.2: ಕಾಡಿಗೆ ಮೇಯಲು ಬಿಟ್ಟಿದ್ದ ಜಾನುವಾರುಗಳನ್ನು ಪಿಕಪ್‌ನಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಆರೋಪದಲ್ಲಿ ಆರು ಮಂದಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕಡಬ ಠಾಣಾ ವ್ಯಾಪ್ತಿಯ 102 ನೆಕ್ಕಿಲಾಡಿ ಗ್ರಾಮದ ಕರ್ಮಾಯಿ ಎಂಬಲ್ಲಿ ಶುಕ್ರವಾರ ನಡೆದಿರುವುದಾಗಿ ವರದಿಯಾಗಿದೆ.

102 ನೆಕ್ಕಿಲಾಡಿ ಗ್ರಾಮದ ಪಂಜೋಡಿ ನಿವಾಸಿ ಗಂಗಾಧರ ಗೌಡ, ಪುರುಷೋತ್ತಮ ಗೌಡ, ಸಕಲೇಶಪುರ ತಾಲೂಕು ಹೆತ್ತೂರು ವಳಲಹಳ್ಳಿ ಸಮೀಪದ ಹೇಮಂತ್ ಕುಮಾರ್ ಸಿ.ಪಿ., ಯಧುಕುಮಾರ್ ಸಿ.ಎ.ಸಿ.ಎಸ್., ಆನಂದ, ಚಾಲಕ ಕೀರ್ತಿ ಬಂಧಿತ ಆರೋಪಿಗಳು. ಇವರಿಂದ ಎರಡು ಹೋರಿ ಹಾಗೂ ಪಿಕಪ್‌ನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ:  ಕಡಬ ಠಾಣಾ ವ್ಯಾಪ್ತಿಯ 102 ನೆಕ್ಕಿಲಾಡಿ ಗ್ರಾಮದ ಕರ್ಮಾಯಿ ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿಗೆ ಸಮೀಪದ ಪಂಜೋಡಿ ಎಂಬಲ್ಲಿ ಕಾಡಿನಲ್ಲಿ ಮೇಯಲು ಬಿಟ್ಟಿದ್ದ ಎರಡು ಹೋರಿಗಳನ್ನು ಅಕ್ರಮವಾಗಿ ಪಿಕಪ್‌ನಲ್ಲಿ ಸಾಗಿಸುತ್ತಿದ್ದರೆನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಪಿಕಪ್‌ನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಪಿಕಪ್‌ನಲ್ಲಿ ಹಿಂಸಾತ್ಮಕವಾಗಿ ಹೋರಿಗಳನ್ನು ಕಟ್ಟಿ ಹಾಕಿರುವುದು ಕಂಡುಬಂದಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಡಬ ಪೊಲೀಸರು ಅದರಲ್ಲಿದ್ದ ಆರು ಮಂದಿ ಆರೋಪಿಗಳನ್ನು, ಹೋರಿ ಹಾಗೂ ಪಿಕಪ್‌ನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಜಾನುವಾರು ಸಾಗಾಟದಲ್ಲಿ ಹಿಂದೂ ಜಾಗರಣಾ ವೇದಿಕೆಯ ಮಾಜಿ ಮುಖಂಡ, ಯುವ ನ್ಯಾಯವಾದಿಯೊಬ್ಬರು ಶಾಮೀಲಾಗಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಬಂಧಿತರ ಆರೋಪಿಗಳಲ್ಲಿ ಈತನ ತಂದೆ ಕೂಡಾ ಸೇರಿದ್ದಾರೆ ಎಂದು ತಿಳಿದುಬಂದಿದೆ. ಈ ದಂಧೆ ನಿರಂತರವಾಗಿ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಶಂಕಿಸಿದ್ದಾರೆ.

ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ವಿಹಿಂಪ ಆಗ್ರಹ

ಈ ಬಗ್ಗೆ ವಿಹಿಂಪ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆಮೇಯಲು ಬಿಟ್ಟಿರುವ ಜಾನುವಾರುಗಳನ್ನು ಕದ್ದು ಮಾರಾಟ ಮಾಡುವ ಹೇಯ ಕೃತ್ಯ ಮಾಡುವ ಎಷ್ಟೇ ಪ್ರಭಾವಿ ವ್ಯಕ್ತಿಯಾಗಿದ್ದರೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಕರ್ಮಾಯಿ ಭಾಗದಲ್ಲಿ ಇಂತಹ ಕೃತ್ಯ ನಿರಂತರವಾಗಿ ನಡೆಯುತ್ತಿದೆ. ಇದರಲ್ಲಿ ಸ್ಥಳೀಯ ಹಾಗೂ ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನ ಇರುವ ವ್ಯಕ್ತಿಯೋರ್ವರು ಶಾಮಿಲಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆಯೂ ಪೊಲೀಸರು ಸೂಕ್ತ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News