ಕಾರವಾರ : ದುರಂತಕ್ಕೆ ಕಾರಣವಾದ ಪ್ಯಾರಾ ಮೋಟರ್ ಹಾರಾಟ

Update: 2020-10-02 17:10 GMT

ಕಾರವಾರ, ಅ. 2: ಪ್ರವಾಸಿಗರನ್ನು ಆಕರ್ಷಿಸುವ ದೃಷ್ಟಿಯಿಂದ ಕಾರವಾರ ಕಡಲ ತೀರದಲ್ಲಿ ಆರಂಭಿಸಲಾಗಿದ್ದ ಪ್ಯಾರಾ ಮೋಟಾರ್ ಹಾರಾಟದ ಸಂದರ್ಭದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಶುಕ್ರವಾರ ದುರಂತಕ್ಕೆ ಕಾರಣವಾಗಿದ್ದು, ಕಾರವಾರ ನೌಕಾನೆಲೆಯ ಕ್ಯಾಪ್ಟನ್ ಓರ್ವರು ಮೃತಪಟ್ಟ ಘಟನೆ ನಡೆದಿದೆ.

ಆಂಧ್ರ ಮೂಲದ ಮಧುಸೂದನ್ ರೆಡ್ಡಿ (55) ಮೃತಪಟ್ಟ ಕಾರವಾರ ನೌಕಾನೆಲೆಯ ಕ್ಯಾಪ್ಟನ್. ಅವರು ಕುಟುಂಬ ಸದಸ್ಯರೊಂದಿಗೆ ಬೆಂಗಳೂರಿ ನಿಂದ ಕಾರವಾರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕುಟುಂಬ ಸಮೇತವಾಗಿ ಕಾರವಾರದ ಕಡಲ ತೀರಕ್ಕೆ ಆಗಮಿಸಿದ್ದರು. ಲಾಕ್‌ಡೌನ್ ತೆರವುಗೊಂಡ ಬಳಿಕ ಕಳೆದ ಎರಡು ದಿನಗಳ ಹಿಂದೆಯಷ್ಟೇ ಆರಂಭಗೊಂಡಿದ್ದ ಪ್ಯಾರಾ ಮೋಟರ್ ಕಂಡು ತಾನು ಆಕಾಶದೆತ್ತರಕ್ಕೆ ಹಾರಾಡ ಬೇಕು ಎಂದು ಮಧುಸೂದನ್ ಅವರು ಮುಂದಾಗಿದ್ದರು. ಆದರೆ ಪ್ಯಾರಾ ಮೋಟರ್‌ನಲ್ಲಿ ತಾಂತ್ರಿಕ ದೋಶ ಕಂಡು ಬಂದ ಹಿನ್ನೆಲೆಯಲ್ಲಿ ಮೋಟರ್ ತುಂಡಾಗಿ ಸಮುದ್ರಕ್ಕೆ ಬಿದ್ದಿತೆನ್ನಲಾಗಿದೆ.

ಪ್ಯಾರಾಚೂಟ್ ಸಮೇತ ಮಧುಸೂದನ ಹಾಗೂ ಪ್ಯಾರಾ ಮೋಟರ್ ನಿರ್ವಹಣೆ ಮಾಡುವ ವಿದ್ಯಾಧರ ವೈದ್ಯ ಎನ್ನುವವರು ಸಮುದ್ರದಲ್ಲಿ ಬಿದ್ದಿದ್ದಾರೆ. ತಕ್ಷಣ ಅವರಿಬ್ಬರನ್ನು ಸಮುದ್ರದಿಂದ ಮೇಲೆತ್ತಲಾಯಿತಾದರೂ ಮಧುಸೂದನ್ ತೀವ್ರ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ. ಪ್ಯಾರಾ ಮೋಟರ್ ಏರುವ ಸಂದರ್ಭದಲ್ಲಿ ಸುರಕ್ಷತೆಗಾಗಿ ಬೆಲ್ಟ್ ಹಾಗೂ ಇನ್ನಿತರ ವಸ್ತುಗಳನ್ನು ಹಾಕಲಾಗಿದ್ದರಿಂದ ಸಮುದ್ರದಲ್ಲಿ ಬಿದ್ದ ಮಧುಸೂದನ್ ಅವರಿಗೆ ಈಜಲು ಸಾಧ್ಯವಾಗದೆ ನೀರಿನಲ್ಲಿ ತೀವ್ರ ಅಸ್ವಸ್ಥಗೊಂಡಿದ್ದರು. ನಿರ್ವಾಹಕ ವಿದ್ಯಾಧರ ವೈದ್ಯ ಕೂಡ ಅಸ್ವಸ್ಥರಾಗಿದ್ದು, ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಕ್ಯಾಪ್ಟನ್ ವಿದ್ಯಾಧರ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಘಟನೆ ನಡೆದ ಸಂದರ್ಭದಲ್ಲಿ ಆ್ಯಂಬ್ಯುಲೆನ್ಸ್‌ಗೆ ಕರೆ ಮಾಡಲಾಗಿತ್ತು. ಆದರೂ ಸೂಕ್ತ ಸಮಯಕ್ಕೆ ಬರದಿದ್ದ ಕಾರಣ ನಗರ ಪೊಲೀಸ್ ಠಾಣೆಯ ಜೀಪಿನಲ್ಲೇ ಅಸ್ವಸ್ಥರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು ಎಂದು ತಿಳಿದು ಬಂದಿದೆ

ಕೊರೋನ ಲಾಕ್‌ಡೌನ್ ಪೂರ್ವದಲ್ಲಿ ಸ್ಥಗಿತಗೊಂಡಿದ್ದ ಹಾರಾಟ

ಕೊರೋನ ಲಾಕ್‌ಡೌನ್ ಪೂರ್ವದಲ್ಲಿ ಪ್ಯಾರಾ ಮೋಟರ್ ಹಾರಾಟ ನಿಲ್ಲಿಸಲಾಗಿತ್ತು. ಕಳೆದ ಎರಡು ದಿನಗಳ ಹಿಂದೆಯಷ್ಟೇ ಹಾರಾಟ ಆರಂಭಿಸ ಲಾಗಿತ್ತು. ಸ್ಥಗಿತಗೊಂಡಿದ್ದ ಪ್ಯಾರಾ ಮೋಟರ್ ಹಾರಾಟದ ಪೂರ್ವದಲ್ಲಿ ಎಲ್ಲ ರೀತಿಯಲ್ಲಿ ಪರಿಶೀಲನೆ ನಡೆಸಬೇಕಾಗಿತ್ತು. ಒಂದೇ ಸಮನೆ ಪ್ರವಾಸಿಗರಿಗೆ ಅವಕಾಶ ನೀಡಿದ್ದರಿಂದ ಕಾರವಾರ ಕಡಲ ತೀರದಲ್ಲಿ ಈ ದುರಂತ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News