ಮೊತ್ತಮೊದಲಿಗೆ ರಶ್ಯದ ನಾಲ್ವರು ಪತ್ರಕರ್ತರಿಗೆ ಸ್ಪುಟ್ನಿಕ್ ಲಸಿಕೆಯ ಪ್ರಯೋಗ

Update: 2020-10-02 18:13 GMT

ಮಾಸ್ಕೊ,ಅ.2: ಸರಕಾರಿ ಸ್ವಾಮ್ಯದ ಎರಡು ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಶ್ಯದ ನಾಲ್ವರು ಪತ್ರಕರ್ತರು ನೂತನ ಸ್ಪುಟ್ನಿಕ್ ಕೋವಿಡ್-19 ಲಸಿಕೆಗಳನ್ನು ಪಡೆಯಲಿರುವ ಮೊದಲಿಗರಾಗಲಿದ್ದಾರೆ. ಕೊರೋನ ಲಸಿಕೆಯ ಕ್ಲಿನಿಕಲ್ ಟ್ರಯಲ್ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಈ ಲಸಿಕೆಯನ್ನು ನೀಡಲಾಗುತ್ತಿದೆ.

 ರಶ್ಯದ ಸರಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ರಿಯಾದ ಇಬ್ಬರು ಪತ್ರಕರ್ತರು ಹಾಗೂ ರಶ್ಯನ್ ಸರಕಾರಿ ಟಿವಿ ಕಂಪೆನಿ ವಿಜಿಟಿಆರ್‌ಕೆಯ ಇಬ್ಬರು ಪತ್ರಕರ್ತರಿಗೆ ಕೋವಿಡ್-19 ಲಸಿಕೆಯನ್ನು ಪ್ರಯೋಗಿಸುವ ಕೊಡುಗೆಯನ್ನು ನೀಡಲಾಗಿದೆಯೆಂದು ಅಧಿಕತ ಮೂಲಗಳು ತಿಳಿಸಿವೆ.

ಕೊರೋನ ಸೋಂಕು ತಗಲುವ ಅತ್ಯಧಿಕ ಅಪಾಯವಿರುವ ವ್ಯಕ್ತಿಗಳಿಗೆ ಕೊರೋನ ಲಸಿಕೆ ನೀಡುವ ಕಾರ್ಯವನ್ನು ರಶ್ಯವು ಈ ತಿಂಗಳು ಆರಂಭಿಸಲಿದೆ.ಈ ಯೋಜನೆಯಡಿ ಸುಮಾರು 400 ಮಂದಿಗೆ ಕೊರೋನ ಲಸಿಕೆಯನ್ನು ನೀಡಲಾಗುವುದು ಎಂದು ಆರೋಗ್ಯ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಕೊರೋನ ಸೋಂಕು ತಗಲುವ ಅತ್ಯಧಿಕ ಅಪಾಯವಿರುವ ಉದ್ಯೋಗಗಳ ಪಟ್ಟಿಯನ್ನು ರಶ್ಯ ಸರಕಾರವು ಕಳೆದ ತಿಂಗಳು ಪ್ರಕಟಿಸಿದ್ದು, ಆರೋಗ್ಯ ಕಾರ್ಯಕರ್ತರು, ಪತ್ರಕರ್ತರು ಹಾಗೂ ಶಿಕ್ಷಕರು ಅದರಲ್ಲಿ ಒಳಗೊಂಡಿದ್ದರು.

ಜಗತ್ತಿನಾದ್ಯಂತ ಕೋವಿಡ್-19 ಚಿಕಿತ್ಸೆಗೆ ಸಂಭಾವ್ಯ ಲಸಿಕೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಪೈಕಿ ರಶ್ಯವು ಕೋವಿಡ್-19 ಲಸಿಕೆಯನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆಗೊಳಿಸಲು ಪರವಾನಗಿ ಪಡೆದ ಪ್ರಪ್ರಥಮ ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News