×
Ad

ಬೇಡಿಕೆ ಈಡೇರಿಸಲು ಒತ್ತಾಯಿಸುತ್ತಿದರೆ ಬೆದರಿಕೆ ನೋಟೀಸು: ಬೀದಿಗಿಳಿದ ಗುತ್ತಿಗೆ ಆಧಾರಿತ ಆರೋಗ್ಯ ಕಾರ್ಯಕರ್ತರ ಅಳಲು

Update: 2020-10-03 14:31 IST

ಮಂಗಳೂರು, ಅ. 3: ಸೇವಾ ಭದ್ರತೆಗೆ ಒತ್ತಾಯಿಸಿ ಪ್ರತಿಭಟಿಸುತ್ತಿದ್ದರೆ ಕೆಲಸದಿಂದ ತೆಗೆದು ಹಾಕುವ ಬೆದರಿಕೆ ನೋಟೀಸು ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಗುತ್ತಿಗೆ ಹಾಗೂ ಹೊರ ಗುತ್ತಿಗೆ ಸಿಬ್ಬಂದಿಗಳು ಅಳಲು ತೋಡಿಕೊಂಡಿದ್ದಾರೆ.

ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವಾ ಭದ್ರತೆಗೆ ಒತ್ತಾಯಿಸಿ ಸೆ. 24ರಿಂದ ಕೆಲಸ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಗುತ್ತಿಗೆ ಆಧಾರಿತ ಆರೋಗ್ಯ ಕಾರ್ಯಕರ್ತ ಸಿಬ್ಬಂದಿ ಇಂದು ಬೀದಿಗಿಳಿದು ಪ್ರತಿಭಟಿಸಿದರು.

ನಗರದ ಮಿನಿ ವಿಧಾನ ಸೌಧದ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಮುಹಮ್ಮದ್ ಅಶ್ರಫ್, ಕಳೆದ ಒಂದೂವರೆ ವರ್ಷದಿಂದ ನಾವು ಹೋರಾಟ ನಡೆಸುತ್ತಿದ್ದೇವೆ ಎಂದರು.

ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದೇ ಭದ್ರತೆ ಇಲ್ಲದೆ, ರಜೆ ಪಡೆಯದೇ ಕುಟುಂಬದಿಂದ ದೂರವಿದ್ದು ಸೇವೆ ಸಲ್ಲಿಸಿದ್ದೇವೆ. ಆದರೆ ಸರಕಾರ ನಮಮ ಸೇವೆಯನ್ನು ನಿರ್ಲಕ್ಷಿಸಿದೆ. ಇದೀಗ ಸೆ. 24ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದು, ನಮ್ಮ ಬೇಡಿಕೆಗಳ ಈಡೇರಿಕೆಗೆ ಮುಂದಾಗಬೇಕಿದ್ದ ಅಧಿಕಾರಿ ವರ್ಗ ನಾವು ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ವಜಾ ಅಥವಾ ಬದಲಿ ವ್ಯವಸ್ಥೆ ಮಾಡುವುದಾಗಿ ನೋಟೀಸು ನೀಡುತ್ತಿದೆ. ಈ ಮೂಲಕ ಕೊರೋನ ವಾರಿಯರ್ಸ್‌ಗಳಾಗಿ ದುಡಿಯುತ್ತಿರುವ ನಮ್ಮನ್ನು ಹೆದರಿಸುತ್ತಿದೆ ಎಂದು ಆರೋಪಿಸಿದರು.

ನೀವು ಗುತ್ತಿಗೆ ಆಧಾರದಲ್ಲಿರುವವರು. ನೀವು ಪ್ರತಿಭಟಿಸುವಂತಿಲ್ಲ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಬೆದರಿಕೆ ನೋಟೀಸು ಕೊಡಿಸಲಾ ಗುತ್ತಿದೆ. ಕೆಲಸದಿಂದ ತೆಗೆದು ಹಾಕುವುದಾಗಿ ಹೇಳುತ್ತಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಪ್ರಧಾನ ಕಾರ್ಯದರ್ಶಿ ರಮೇಶ್, ನಾವು ನಮ್ಮ ಸಂಕಷ್ಟಗಳನ್ನು ಯಾರಲ್ಲಿ ಹೇಳಿಕೊಳ್ಳುವುದು. ಒಂದು ವರ್ಷದ ಗುತ್ತಿಗೆಯನ್ನು ಗುತ್ತಿಗೆಯಾಗಿಯೇ ಮುಂದುವರಿಸುತ್ತಾರೆ. ನಾನು 18 ವರ್ಷಗಳಿಂದ ಆರೋಗ್ಯ ಕಾರ್ಯಕರ್ತನಾಗಿ ಇನ್ನೂ ಗುತ್ತಿಗೆಯಡಿಯೇ ಕೆಲಸ ನಿರ್ವಹಿಸುತ್ತಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರಕಾರ ಈವರೆಗೆ ಭರವಸೆ ನೀಡಿದೆಯೇ ಹೊರತು ಯಾವುದೇರೀತಿಯ ಸೇವಾ ಭದ್ರತೆಯಾಗಲಿ, ವೇತನ ಹೆಚ್ಚಳವಾಗಲಿ ಇಲ್ಲ. ಖಾಯಂ ಉದ್ಯೋಗಿಗಳು ಮಾಡುವ ಕೆಲಸಕ್ಕೆ ದುಪ್ಪಟ್ಟಾಗಿ ನಾವು ಮಾಡುತ್ತೇವೆ. ಆದರೆ ವೇತನದಲ್ಲಿ ತಾರತಮ್ಯ. ಸಿಗುವ ಕನಿಷ್ಠ ವೇತನದಲ್ಲಿ ಮತ್ತೆ ಕಡಿತ ಮಾಡಿದರೆ ನಾವು ನಮ್ಮ ಕುಟುಂಬದ ಜತೆ ಬದುಕುವುದಾದರೂ ಹೇಗೆ ? ಜೀತದಾಳುಗಳಂತೆ ದುಡಿಸಲಾಗುತ್ತಿದೆ. ನಮಗೆ ಸಮಾನ ವೇತನ ನೀಡಲಿ. ನಾವು ನಮ್ಮನ್ನು ಖಾಯಂ ಮಾಡಿ ಎಂದು ಯಾವತ್ತೂ ಕೇಳಿಲ್ಲ. 2016ರಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಎಂದು ಸರಕಾರ ಹೇಳಿದ್ದರೂ ನಮಗೆ ಅದನ್ನು ಅನ್ವಯಿಸಲಾಗಿಲ್ಲ. ಇದೀಗ ಬೀದಿಗಿಳಿದಿದ್ದೇವೆ. ನಾವು ಬೀದಿಗೆ ಬರಲು ಕಾರಣ ಸರಕಾರವೇ ಎಂದು ಆರೋಗ್ಯ ಕಾರ್ಯಕರ್ತರಾದ ಸುಪ್ರಿಯ ಆಕ್ರೋಶ ವ್ಯಕ್ತಪಡಿಸಿದರು.

ನಾನು 13 ವರ್ಷಗಳಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕೆಲಸ ನಿರ್ವಹಿಸುತ್ತಿದ್ದೇನೆ. ಎಲ್ಲರಿಗೂ ಆರೋಗ್ಯ ತಲುಪಿಸುತ್ತಿರುವ ನಮ್ಮ ಕಷ್ಟಗಳನ್ನು ಯಾಕೆ ಸರಕಾರ ಕೇಳುತ್ತಿಲ್ಲ ಎಂದು ಪ್ರಶ್ನಿಸಿದರು. ಸಮಾನ ಕೆಲಸಕ್ಕೆ ಸಮಾನ ವೇತನ, ಸರಕಾರದ ಸಮಸ್ಯೆಗಳ ಬಗ್ಗೆ ನಮಗೂ ಅರಿವಿದೆ. ಆದರೆ ನಮ್ಮ ಪದಾಧಿಕಾರಿಗಳನ್ನು ಕರೆದು ನಮ್ಮ ಬೇಡಿಕೆಗಳನ್ನು ಈಡೇರಿಸಿ. ಜನಪ್ರತಿನಿಧಿಗಳೇ ನಿಮ್ಮ ಕುಟುಂಬದ ಸದಸ್ಯರೇ ಬೀದಿಗಿಳಿದಿದ್ದಾರೆಂದು ಪರಿಗಣಿಸಿ ಮ್ಮ ಸಂಕಷ್ಟಗಳನ್ನು ಬಗೆಹರಿಸಿ.
- ಕುಮುದ. ಆರೋಗ್ಯ ಕಾರ್ಯಕರ್ತೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News