2019ರಲ್ಲಿ 30 ದೇಶದ್ರೋಹ ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಮಾತ್ರ ಶಿಕ್ಷೆ

Update: 2020-10-03 10:02 GMT

ಹೊಸದಿಲ್ಲಿ:  ದೇಶದ ನ್ಯಾಯಾಲಯಗಳಲ್ಲಿ ದೇಶದ್ರೋಹ ಪ್ರಕರಣಗಳು ದಾಖಲಾಗುವುದು ಹೆಚ್ಚಾಗುತ್ತಿದೆ. ಕಳೆದ ವರ್ಷ ಇಂತಹ ಪ್ರಕರಣಗಳ ಸಂಖ್ಯೆ ಶೇ 25ರಷ್ಟು ಏರಿಕೆಯಾಗಿತ್ತಲ್ಲದೆ ಗರಿಷ್ಠ ಪ್ರಕರಣಗಳು ಕರ್ನಾಟಕದಿಂದಾಗಿದ್ದವು. ಆದರೆ  ಕಳೆದ ವರ್ಷ ತನಿಖೆ ಪೂರ್ಣಗೊಂಡ 30 ಪ್ರಕರಣಗಳ ಪೈಕಿ ಕೇವಲ ಒಂದು ಪ್ರಕರಣದಲ್ಲಿ ಇಬ್ಬರಿಗೆ ಜೈಲು ಶಿಕ್ಷೆಯಾಗಿದ್ದರೆ ಉಳಿದ 29 ಪ್ರಕರಣಗಳಲ್ಲಿ ಆರೋಪ ಸಾಬೀತು ಪಡಿಸುವುದು ಸಾಧ್ಯವಾಗಿರಲಿಲ್ಲ ಎಂದು deccanherald.com ವರದಿ ಮಾಡಿದೆ.

ದೇಶದಲ್ಲಿ 2015 ಹಾಗೂ 2019ರ ನಡುವೆ 283 ದೇಶದ್ರೋಹ ಪ್ರಕರಣಗಳು ದಾಖಲಾಗಿದ್ದವು. ಇವುಗಳ ಪೈಕಿ 56 ಪ್ರಕರಣಗಳ ವಿಚಾರಣೆ ನಡೆದು ಒಟ್ಟು 51 ಪ್ರಕರಣಗಳಲ್ಲಿ ಕನಿಷ್ಠ 55 ಮಂದಿ ದೋಷಮುಕ್ತಗೊಂಡಿದ್ದಾರೆ. ಈ ಅವಧಿಯಲ್ಲಿ ಐದು ಪ್ರಕರಣಗಳಲ್ಲಿ ಒಟ್ಟು 9 ಮಂದಿಗೆ ಶಿಕ್ಷೆಯಾಗಿದೆ.

ಕಳೆದ ವರ್ಷ 30 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದರೆ 2018ರಲ್ಲಿ ಈ ಸಂಖ್ಯೆ 13 ಹಾಗೂ 2017ರಲ್ಲಿ ಆರು ಆಗಿತ್ತು.  2016 ಹಾಗೂ 2015ರಲ್ಲಿ ವಿಚಾರಣೆ ಪೂರ್ಣಗೊಂಡ ಪ್ರಕರಣಗಳ ಸಂಖ್ಯೆ ಕ್ರಮವಾಗಿ ಮೂರು ಹಾಗೂ ನಾಲ್ಕು ಆಗಿದ್ದವು.

ಕಳೆದ ವರ್ಷ ಕನಿಷ್ಠ ಮಂದಿಗೆ, ಅಂದರೆ ಶೇ 3.33ರಷ್ಟು ಮಂದಿ ಆರೋಪಿಗಳಿಗೆ ಶಿಕ್ಷೆಯಾಗಿದ್ದರೆ, ಅದರ ಹಿಂದಿನ ವರ್ಷಗಳಲ್ಲಿ ಈ ಪ್ರಮಾಣ ಕ್ರಮವಾಗಿ ಶೇ  15.40, ಶೇ 16.70 ಹಾಗೂ ಶೇ 33.60 ಆಗಿತ್ತು.

ಕರ್ನಾಟಕದಲ್ಲಿ 2018ರಲ್ಲಿ ಎರಡು ದೇಶದ್ರೋಹ ಪ್ರಕರಣಗಳನ್ನು ದಾಖಲಿಸಲಾಗಿತ್ತಾದರೆ ಕಳೆದ ವರ್ಷ ಪ್ರಕರಣಗಳ ಸಂಖ್ಯೆ 22ಕ್ಕೆ ಏರಿಕೆಯಾಗಿತ್ತು. ದೇಶಾದ್ಯಂತ ಕಳೆದ ವರ್ಷ ದಾಖಲಾದ ಪ್ರಕರಣಗಳ ಸಂಖ್ಯೆ 93 ಆಗಿತ್ತು. ಗರಿಷ್ಠ ದೇಶದ್ರೋಹ ಪ್ರಕರಣಗಳು ದಾಖಲಾದ ಇತರ ರಾಜ್ಯಗಳೆಂದರೆ ಅಸ್ಸಾಂ (17), ಜಮ್ಮು ಕಾಶ್ಮೀರ (11) ಹಾಗೂ ಉತ್ತರ ಪ್ರದೇಶ (10).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News