ಹತ್ರಸ್ ಯುವತಿ ಮೇಲೆ ಅತ್ಯಾಚಾರ ನಡೆದೇ ಇಲ್ಲ ಎಂದು ಖಾಸಗಿ ಏಜೆನ್ಸಿ ಮೂಲಕ ಹೇಳಿಸುತ್ತಿರುವ ಉತ್ತರ ಪ್ರದೇಶ ಸರಕಾರ

Update: 2020-10-03 10:38 GMT

ಹೊಸದಿಲ್ಲಿ: ಸರಕಾರದ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡಲು ಎಲ್ಲಾ ರಾಜ್ಯಗಳಲ್ಲೀ ಮಾಹಿತಿ ಇಲಾಖೆಗಳಿದ್ದರೂ ಉತ್ತರ ಪ್ರದೇಶ ಸರಕಾರ ಮಾತ್ರ ಮುಂಬೈಯ ಪಿಆರ್ ಏಜನ್ಸಿಯ ಸೇವೆ ಪಡೆದುಕೊಂಡಿದ್ದೇ ಅಲ್ಲದೆ ಹತ್ರಸ್ ಯುವತಿಯ ಮೇಲೆ ಅತ್ಯಾಚಾರ ನಡೆದೇ ಇಲ್ಲ ಎಂದು ಏಜನ್ಸಿ ಮೂಲಕ ಹೇಳಿಸಿದೆ ಎಂದು thewire.in ವರದಿ ಮಾಡಿದೆ.

ಭಾರತದಲ್ಲಿರುವ ಹಲವಾರು ವಿದೇಶಿ ಮಾಧ್ಯಮಗಳ ಪ್ರತಿನಿಧಿಗಳು ಹಾಗೂ ಕೆಲ ರಾಷ್ಟ್ರೀಯ ದೈನಿಕಗಳ ಪ್ರತಿನಿಧಿಗಳಿಗೆ ಗುರುವಾರ ರಾತ್ರಿ ಮುಂಬೈ ಮೂಲದ ಪಿಆರ್ ಸಂಸ್ಥೆ ಕಾನ್ಸೆಪ್ಟ್ ಪಿಆರ್ ಮೂಲಕ `ಸ್ಪಷ್ಟೀಕರಣ ಹೇಳಿಕೆ' ಬಂದಿದೆ. ಅದರ ಶೀರ್ಷಿಕೆಯೂ ವ್ಯಾಕರಣದ ದೋಷವನ್ನು ಎತ್ತಿ ತೋರಿಸುತ್ತಿತ್ತು.

"ಹತ್ರಸ್ ಗರ್ಲ್ ವಸ್ ನಾಟ್ ರೇಪ್, ರಿವೀಲ್ ಫಾರೆನ್ಸಿಕ್ ಇನ್ವೆಸ್ಟಿಗೇಶನ್, ಪ್ರಿಲಿಮಿನರಿ ಮೆಡಿಕಲ್ ಎಂಡ್ ಪೋಸ್ಟ್ ಮಾರ್ಟಂ ರಿಪೋರ್ಟ್" ಎಂದು ಬರೆಯಲಾಗಿತ್ತು (ಹತ್ರಸ್ ಯುವತಿಯದ್ದು ಅತ್ಯಾಚಾರವಲ್ಲೆಂದು ವಿಧಿವಿಜ್ಞಾನ ತನಿಖೆ. ಪ್ರಾಥಮಿಕ ವೈದ್ಯಕೀಯ ವರದಿ ಮತ್ತು ಮರಣೋತ್ತರ ವರದಿ ತಿಳಿಸುತ್ತದೆ). ಬಈ ಸ್ಪಷ್ಟೀಕರಣ ಹೇಳಿಕೆಯಲ್ಲಿ ``ರಾಜ್ಯವನ್ನು ಜಾತಿ ಸಂಘರ್ಷದತ್ತ ತಳ್ಳುವ ಷಡ್ಯಂತ್ರವೂ ಇದೆ ಎಂದು ವರದಿಗಳು ಬಹಿರಂಗ ಪಡಿಸಿವೆ,'' ಎಂದು ಬರೆಯಲಾಗಿತ್ತು. ಅಷ್ಟೇ ಅಲ್ಲದೆ ``ಈ ಇಡೀ ಪ್ರಕರಣದ ಹಿಂದಿನ ಕೆಟ್ಟ ಉದ್ದೇಶವನ್ನು ಹಾಗೂ ಉತ್ತರ ಪ್ರದೇಶದಲ್ಲಿ ಸಾಮರಸ್ಯವನ್ನು ಕದಡಲು ಸ್ಥಾಪಿತ ಹಿತಾಸಕ್ತಿಗಳ ಯತ್ನವನ್ನು ಮುಖ್ಯಮಂತ್ರಿ ಆದಿತ್ಯನಾಥ್ ಅವರ ಆದೇಶದಂತೆ ರಚಿಸಲಾಗಿರುವ ಎಸ್‍ಐಟಿ ಬಹಿರಂಗಗೊಳಿಸಲಿದೆ,' ಎಂದೂ ಬರೆಯಲಾಗಿದೆ.

 “ಜವಾಬ್ದಾರಿಯುತ ಅಧಿಕಾರಿಗಳ ಹೇಳಿಕೆಗಳ ಹೊರತಾಗಿಯೂ ಸತ್ಯವನ್ನು ತಿರುಚಿ ಇಂತಹ ಒಂದು ತಪ್ಪು ಅಭಿಪ್ರಾಯ ಮೂಡಲು ಯಾರು ಕಾರಣರು ಎಂದು ಉ ಪ್ರ ಪೊಲೀಸರು ತನಿಖೆ ನಡೆಸಲಿದ್ದಾರೆ.'' ಎಂದೂ ಸ್ಪಷ್ಟೀಕರಣ ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಾತ್ರೋರಾತ್ರಿ ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ಪೊಲೀಸರು ನಡೆಸಿರುವುದನ್ನು ಸಮರ್ಥಿಸುವ ಉದ್ದೇಶದಿಂದ ನೀಡಲಾದ ಇನ್ನೊಂದು ಹೇಳಿಕೆಯಲ್ಲಿ ``ಅನುಚಿತ ಘಟನೆಯನ್ನು ತಡೆಯಲು ಪೊಲೀಸರು ಕ್ಷಿಪ್ರ ಕ್ರಮ ಕೈಗೊಂಡರು : ಪ್ರಕರಣ ಕುರಿತು  ಇನ್ನೂ ಸಮಗ್ರ ತನಿಖೆ,'' ಎಂದು ಬರೆಯಲಾಗಿತ್ತು.

"ಹತ್ರಸ್‍ನ 19 ವರ್ಷ ಯುವತಿಯ ಫಾರೆನ್ಸಿಕ್ ವರದಿ ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಹೇಳಿದೆ.'' ಎಂದು ಉತ್ತರ ಪ್ರದೇಶ ಡಿಜಿಪಿ ಪ್ರಶಾಂತ್ ಕುಮಾರ್ ಈ ಹಿಂದೆ ನೀಡಿದ ಹೇಳಿಕೆಯನ್ನೇ ಈ ಸ್ಪಷ್ಟೀಕರಣ ನೋಟ್ ಕೂಡ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News