ಹತ್ರಸ್ ಸಂತ್ರಸ್ತೆಯ ವೀಡಿಯೋ ಟ್ವೀಟ್ ಮಾಡಿ ವಿವಾದಕ್ಕೀಡಾದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ

Update: 2020-10-03 12:25 GMT
ಅಮಿತ್ ಮಾಲವಿಯ( twitter/@amitmalviya)
 

ಹೊಸದಿಲ್ಲಿ: ಹತ್ರಸ್ ಅತ್ಯಾಚಾರ ಸಂತ್ರಸ್ತೆಯ ವೀಡಿಯೋವೊಂದನ್ನು ಇಂದು ಟ್ವಿಟರ್‍ನಲ್ಲಿ ಶೇರ್ ಮಾಡುವ ಮೂಲಕ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವಿಯ ವಿವಾದಕ್ಕೀಡಾಗಿದ್ದಾರೆ. ಈ ರೀತಿ ಅತ್ಯಾಚಾರ ಸಂತ್ರಸ್ತೆಯ ವೀಡಿಯೋ ಪ್ರಕಟಿಸುವುದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ತಜ್ಞರು ಹೇಳುತ್ತಾರೆ.

ಅತ್ಯಾಚಾರ ಸಂತ್ರಸ್ತೆ ಒಬ್ಬ ವ್ಯಕ್ತಿಯ ಜತೆ ಮಾತನಾಡುತ್ತಿರುವುದು ಹಾಗೂ ಅತ್ಯಾಚಾರಕ್ಕೆ ಪ್ರತಿರೋಧ ತೋರಿದಾಗ ತನ್ನ ಕುತ್ತಿಗೆ ಹಿಚುಕಲಾಗಿತ್ತು ಎಂದು ಆಕೆ ಹೇಳುವುದು ವೀಡಿಯೋದಲ್ಲಿ ಕೇಳಿಸುತ್ತದೆ.

"ಎಎಂಯು ಹೊರಗೆ ಹತ್ರಸ್ ಸಂತ್ರಸ್ತೆ ವರದಿಗಾರರ ಜತೆ ಮಾತನಾಡುತ್ತಾ ತನ್ನ ಕತ್ತು ಹಿಚುಕಲು ಯತ್ನಿಸಲಾಗಿತ್ತು ಎಂದಿದ್ದಳು.  ಇದು ಅಪರಾಧದ ಬರ್ಬರತೆಯನ್ನು ಗೌಣವಾಗಿಸುವ ಯತ್ನವಲ್ಲ, ಆದರೆ ಘಟನೆಗೆ ಬೇರೆ ಬಣ್ಣ ಹಚ್ಚಿ ಒಂದು ಹೇಯ ಅಪರಾಧದ ಗಂಭೀರತೆಯನ್ನು ಇನ್ನೊಂದರ ಎದುರು ತುಚ್ಛವಾಗಿಸುವುದು ಸರಿಯಲ್ಲ,'' ಎಂದು ವೀಡಿಯೋ ಜತೆ ಮಾಲವಿಯ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಹಾಗೂ ವೀಡಿಯೋ ವಿವಾದ ಕುರಿತಂತೆ ಮಾಲವಿಯ ಪ್ರತಿಕ್ರಿಯಿಸದೇ ಇದ್ದರೂ ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಮಾಡಿದ ಟ್ವೀಟ್ ಒಂದನ್ನು ಮಾಲವಿಯ ರಿಟ್ವೀಟ್ ಮಾಡಿದ್ದಾರೆ. ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಫಾರೆನ್ಸಿಕ್ ವರದಿಗಳು ಹೇಳುವುದರಿಂದ ಮಾಲವಿಯ ಅವರು ಯಾವುದೇ ಕಾನೂನು ಉಲ್ಲಂಘಿಸಿಲ್ಲ ಎಂದು ಪ್ರೀತಿ ತಮ್ಮ ಟ್ವೀಟ್‍ನಲ್ಲಿ ಹೇಳಿದ್ದರು.

ಆದರೆ ಸಂತ್ರಸ್ತೆಯ ಹೆಸರು ಅಥವಾ ಗುರುತು ಬಹಿರಂಗಗೊಳಿಸುವ ಏನನ್ನಾದರೂ ಪ್ರಕಟಿಸುವವರು ಐಪಿಸಿ ಸೆಕ್ಷನ್ 376, 376ಎ, 376ಬಿ, 376ಸಿ ಹಾಗೂ 376ಡಿ ಅನ್ವಯ ಶಿಕ್ಷಾರ್ಹರು ಎಂದು ಕಾನೂನು ತಜ್ಞರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News