×
Ad

ಮಂಗಳೂರು : ಕಳವು ಪ್ರಕರಣದ 1.49 ಕೋಟಿ ರೂ. ಮೌಲ್ಯದ ಸೊತ್ತು ವಾರಿಸುದಾರರಿಗೆ ಹಸ್ತಾಂತರ

Update: 2020-10-03 17:27 IST

ಮಂಗಳೂರು, ಅ. 3: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಎಪ್ರಿಲ್-ಸೆಪ್ಟೆಂಬರ್‌ವರೆಗೆ ನಡೆದ ಕಳವು ಪ್ರಕರಣಗಳಲ್ಲಿ ಸ್ವಾಧೀನ ಪಡಿಸಲಾದ 1.49 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ವಾರೀಸುದಾರರಿಗೆ ಹಸ್ತಾಂತರ ಕಾರ್ಯಕ್ರಮ ಶನಿವಾರ ನಡೆಯಿತು.

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ ನಡೆದ ‘ಕಳವಾದ ಸೊತ್ತುಗಳ ಹಸ್ತಾಂತರ’ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಕಮಿಷನರ್ ಡಾ. ವಿಕಾಸ್ ಕುಮಾರ್ ಮಾತನಾಡಿ, ಈ ಅವಧಿಯಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ಸುಮಾರು 5.37ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಲಾಗಿತ್ತು ಎಂದು ಹೇಳಿದರು.

2019-2020ನೇ ಸಾಲಿನ ಎಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಒಟ್ಟು 9,05,35,412 ಕೋಟಿ ರೂ. ಮೌಲ್ಯದ ಸೊತ್ತುಗಳು ಕಳವಾಗಿತ್ತು. ಅವುಗಳಲ್ಲಿ ಪ್ರಾಪರ್ಟಿ ಪರೇಡ್‌ಗೆ 2 ಕೆಜಿ 277ಗ್ರಾಂ 286 ಮಿಲಿ ಗ್ರಾಂ ಚಿನ್ನ, 25 ದ್ವಿಚಕ್ರ ವಾಹನ, 19ಮೊಬೈಲ್ ಫೋನ್, 11 ಇತರ ಸೊತ್ತುಗಳನ್ನು ಹಾಗೂ 48,13,951ನಗದನ್ನು ಹಾಜರುಪಡಿಸಿ, 1,49,35,611 ಕೋಟಿ ರೂ. ಮೌಲ್ಯದ ಸೊತ್ತು ಹಸ್ತಾಂತರಿಸಲಾಗುತ್ತಿದೆ. ಉಳಿದ ಸೊತ್ತುಗಳನ್ನು ಕೋರ್ಟ್ ಅನುಮತಿ ಬಂದ ಬಳಿಕ ಹಸ್ತಾಂತರಿಸಲಾಗುವುದು ಎಂದರು.

ಕೇಂದ್ರ ಉಪ ವಿಭಾಗ: ದಕ್ಷಿಣ ಉಪವಿಭಾಗ ವ್ಯಾಪ್ತಿಯಲ್ಲಿ 98.061 ಚಿನ್ನಾಭರಣ, 2 ವಾಹನ, 1ಮೊಬೈಲ್, ಇತರ 1, ಒಟ್ಟು 4,42,000ರೂ. ವೌಲ್ಯದ ಸೊತ್ತು, 15,12,000 ನಗದು ಸೇರಿದಂತೆ ಒಟ್ಟು 19,54,000ರೂ. ವೌಲ್ಯದ ಸೊತ್ತುಗಳು ಹಾಜರುಪಡಿಸಲಾಗಿದೆ. ಎಸಿಪಿ ಜಗದೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಉತ್ತರ ಉಪವಿಭಾಗ: ಉತ್ತರ ಉಪವಿಭಾಗ ವ್ಯಾಪ್ತಿಯ 6 ಠಾಣೆಗಳಲ್ಲಿ 188.600 ಗ್ರಾಂ ಚಿನ್ನಾಭರಣ, 6 ಮೊಬೈಲ್, 13 ವಾಹನ, 10 ಇತರ, 12,10,160 ರೂ. ಮೌಲ್ಯದ ಸೊತ್ತುಗಳು, 30,98,251 ನಗದು ಸೇರಿದಂತೆ ಒಟ್ಟು 43,08,411ರೂ. ಮೌಲ್ಯದ ಸೊತ್ತುಗಳು ಹಾಜರುಪಡಿಸಲಾಗಿದೆ.

ಪಶ್ಚಿಮ ಉಪವಿಭಾಗ: ಕೇಂದ್ರ ಉಪವಿಭಾಗ ವ್ಯಾಪ್ತಿಯಲ್ಲಿ 2.277ಕೆಜಿ ಚಿನ್ನಾಭರಣ, 19 ಮೊಬೈಲ್, 25 ವಾಹನ, 11 ಇತರ, 1,01,21,666 ರೂ. ಮೌಲ್ಯದ ಸೊತ್ತುಗಳು, 48,13,951 ನಗದು ಸೇರಿದಂತೆ ಒಟ್ಟು 1,49,35,611 ರೂ. ಮೌಲ್ಯದ ಸೊತ್ತುಗಳು ಹಾಜರುಪಡಿಸಲಾಗಿದೆ ಎಂದರು.

ಕಮಿಷನರ್ ಅಭಿನಂದನೆ: ಪ್ರಕರಣ ಪತ್ತೆಹಚ್ಚುವಲ್ಲಿ ಯಶಸ್ವಿ ಕಾರ್ಯಾಚರಣೆಗೆ ಶ್ರಮಿಸಿದ ಡಿಸಿಪಿಗಳಾದ ಅರುಣಾಂಶುಗಿರಿ, ವಿನಯ್ ಗಾಂವ್ಕರ್, ಎಸಿಪಿಗಳಾದ ಬೆಳ್ಳಿಯಪ್ಪ, ಜಗದೀಶ್, ರಂಜಿತ್ ಸೇರಿದಂತೆ ನಗರ ಅಪರಾಧ ಪತ್ತೆದಳದ ತಂಡ, ಎಲ್ಲ ನಿರೀಕ್ಷಕರು, ಉಪ ನಿರೀಕ್ಷಕರು, ಸಹಾಯಕ ಪೊಲೀಸ್ ಉಪನಿರೀಕ್ಷಕರು, ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳು ಎಂದರು.

50ಲಕ್ಷ ರೂ. ನಗದು ಹಸ್ತಾಂತರ

ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಇಡ್ಯಾ ಗ್ರಾಮದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಆ.17ರಿಂದ ಆ.18ರ ಮಧ್ಯೆ 50 ಲಕ್ಷ ರೂ. ಮೌಲ್ಯದ ನಗದು, 200 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆ ಆರಂಭಿಸಿದ ಸುರತ್ಕಲ್ ಪೊಲೀಸರು ನಾಲ್ವರು ಆರೋಪಿಗಳಾದ ರಘು ಸಿ, ಸೆಲ್ಲಪ್ಪನ್, ಅಮೇಶ್ ಅಯ್ಯಪ್ಪನ್, ನವೀನ್ ಪೂಜಾರಿ, ಸಂತೋಷ್ ಪೂಜಾರಿ ಅವರನ್ನು ಬಂಧಿಸಿದ್ದರು.

ಕಳವಾದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ವಾರೀಸುದಾರರಿಗೆ ಹಸ್ತಾಂತರಿಸಲಾಗಿದೆ. ಉತ್ತರ ವಿಭಾಗದ ಎಸಿಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಚಂದ್ರಪ್ಪ ಮತ್ತು ತಂಡ ಕೇವಲ ಒಂದು ತಿಂಗಳ ಅವಧಿಯಲ್ಲಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿತು.

ಪೊಲೀಸರು ಮುತುವರ್ಜಿವಹಿಸಿ ಕಾರ್ಯಾಚರಣೆ ನಡೆಸಿದ ಪರಿಣಾಮ ಇದು ಸಾಧ್ಯವಾಯಿತು. ಕಳವಾದ 50ಲಕ್ಷ ರೂ. ಹಣ ಹಸ್ತಾಂತರ ಮಾಡಿದ್ದು, ಇನ್ನೂ ಹಣ ಜಪ್ತಿ ಮಾಡಲು ಬಾಕಿಯಿದೆ. ಕೂಡಲೇ ಆರೋಪಿಗಳಿಂದ ಮುಟ್ಟುಗೋಲು ಹಾಕಿ ನೀಡಲಿ ಎಂದು ಕಳವಾದ ಮನೆಯ ಸಂತ್ರಸ್ತೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News