ನಿಟ್ಟೆ, ಮಣಿಪಾಲ, ಮಂಗಳೂರು ವಿವಿಗಳಿಂದ ‘ತುಳು ದಿನಾಚರಣೆ’
ಉಡುಪಿ, ಅ.3: ತುಳುವರಾಗಿ ನಮ್ಮ ತಾಯಿ, ತಾಯ್ನುಡಿಯನ್ನು ಮರೆಯ ಬಾರದು. ಹೊಸತಲೆಮಾರಿನವರು ತುಳುಪ್ರೀತಿಯನ್ನು ಮುಂದು ವರಿಸಬೇಕು ಎಂದು ಆನ್‌ಲೈನ್ ಮೂಲಕ ಆಚರಿಸಲಾದ ತುಳು ದಿನದ ಅಧ್ಯಕ್ಷತೆಯನ್ನು ವಹಿಸಿದ್ದ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಹೇಳಿದ್ದಾರೆ.
ನಿಟ್ಟೆ ವಿಶ್ವವಿದ್ಯಾನಿಲಯ, ಮಣಿಪಾಲ ವಿಶ್ವವಿದ್ಯಾನಿಲಯ ಮತ್ತು ಮಂಗಳೂರು ವಿಶ್ವವಿದ್ಯಾನಿಲಯಗಳ ಸಹಯೋಗದಲ್ಲಿ ವಿವಿಧ ತುಳು ಸಂಘಟನೆಗಳ ಬೆಂಬಲದೊಂದಿಗೆ ಗಾಂಧೀಜಯಂತಿಯ ಸಂದರ್ಭದಲ್ಲಿ ನಡೆದ ತುಳು ದಿನಾಚರಣೆ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮದ ಉದ್ಘಾಟನೆ ಮಣಿಪಾಲ, ಮಂಗಳೂರು ಹಾಗೂ ನಿಟ್ಟೆ ವಿಶ್ವವಿದ್ಯಾನಿಲಯಗಳಲ್ಲಿ ಏಕಕಾಲದಲ್ಲಿ ನಡೆಯಿತು. ದಿಕ್ಸೂಚಿ ಭಾಷಣ ಮಾಡಿದ ಮಣಿಪಾಲ ಮಾಹೆ ವಿವಿಯ ಸಹಕುಲಾಧಿಪತಿ ಪ್ರೊ. ಎಚ್.ಎಸ್. ಬಲ್ಲಾಳ್, ಕಯ್ಯೊರರ ’ಕನ್ನಡಾಂತರ್ಗತ ತುಳುನಾಡು’ವನ್ನು ಉಲ್ಲೇ ಖಿಸಿ, ಹೊಸ ಶಿಕ್ಷಣನೀತಿಯಲ್ಲಿ ಮಾತೃಭಾಷೆಯಲ್ಲಿ ಕಲಿಕೆಗೆ ಒತ್ತು ನೀಡಲಾಗಿದೆ.18 ವರ್ಷಗಳ ಕಾಲ ನಡೆದು ಸಂಪನ್ನಗೊಂಡ ತುಳುನಿಘಂಟು ಯೋಜನೆಯ ನೆನಪಿನಲ್ಲಿ ತುಳುದಿನ ನಡೆಯುತ್ತಿದೆ ಎಂದವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ.ಎಸ್. ಯಡಪಡಿತ್ತಾಯ ಮಾತನಾಡಿ ತುಳುವಿನ ಬೆಳವಣಿಗೆಗೆ ಮಂಗಳೂರು ವಿಶ್ವವಿದ್ಯಾನಿಲಯ ಹಿಂದೆಯೂ ಬೆಂಬಲ ನೀಡಿದೆ, ಈಗಲೂ ನೀಡುತ್ತಿದೆ, ಇದನ್ನು ಇನ್ನು ಮುಂದುವರಿಸಲಿದೆ ಎಂದರು.
ಮಣಿಪಾಲ ಮಾಹೆ ವಿವಿಯ ಕುಲಪತಿ ಲೆ. ಜ.ಡಾ. ಎಂ.ಡಿ. ವೆಂಕಟೇಶ್, ‘ತುಳುವ’ ಸಂಶೋಧನಾ ಪತ್ರಿಕೆಯ ಹೊಸ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ನಿಟ್ಟೆ ವಿವಿಯಿಂದ ಪ್ರಕಾಶಿತ, ಪ್ರದ್ಯೋತ್ ಹೆಗ್ಡೆ ಅವರಿಂದ ರಚಿತವಾದ ತುಳು ಪುಸ್ತಕವನ್ನು ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಬಿಡುಗಡೆ ಮಾಡಿ ಸೇರಿಗೆಯ ನುಡಿಯಲ್ಲಿ 21ನೆಯ ಶತಮಾನಕ್ಕೆ ಸರಿಹೊಂದುವಂತೆ ತುಳು ಜಾತಿಪದ ಸಂಚಯದ ಡಿಜಿಟೆಸ್ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಪುಸ್ತಕದ ಕುರಿತು ಡಾ. ಗುರುಪ್ರಸಾದ್ ಮಾತನಾಡಿದರು. ನಿಟ್ಟೆ ವಿವಿ ಸಹಕುಲಪತಿ ಡಾ. ಎಂಎಸ್ ಮೂಡಿತ್ತಾಯ ಸ್ವಾಗತಿಸಿದರು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಮತ್ತು ಗಾಂಧಿಯನ್ ಸೆಂಟರ್ ಫಾರ್ ಫಿಲಸಾಫಿಕಲ್ ಆರ್ಟ್ಸ್‌ನ ನಿರ್ದೇಶಕ ಪ್ರೊ.ವರದೇಶ ಹಿರೇಗಂಗೆ ಪ್ರಸ್ತಾವಿಕ ನುಡಿಗಳನ್ನಾಡಿದರು. ಮಂಗಳೂರು ವಿವಿ ತುಳುಪೀಠದ ಸಂಯೋಜಕ ಡಾ.ಮಾಧವ ಎಂ.ಕೆ. ವಂದಿಸಿದರು. ಡಾ. ಸಾಯಿಗೀತಾ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ತುಳು ಅಧ್ಯಯನದಲ್ಲಿ ನಿರತವಾಗಿರುವ ಸಂಸ್ಥೆಗಳು, ಸ್ಥಳೀಯ, ದೇಶ ಮತ್ತು ವಿದೇಶಗಳಲ್ಲಿರುವ ಮೂವತ್ತೈದಕ್ಕೂ ಹೆಚ್ಚು ತುಳು ಸಂಘಟನೆಗಳ ಕಾರ್ಯನಿರ್ವಹಣೆಯ ಕುರಿತು ದೃಶ್ಯಪ್ರಸ್ತುತಿ ನಡೆಯಿತು. ಇಡೀ ಕಾರ್ಯಕ್ರಮ ನಿಟ್ಟೆ ವಿವಿಯ ಯೂಟ್ಯೂಬ್ ಚಾನಲ್‌ನಲ್ಲಿ ನೇರ ಪ್ರಸಾರವಾಯಿತು.