ಗಾಂಧಿವಾದ ಬಿಟ್ಟರೆ ದೇಶಕ್ಕೆ ಭವಿಷ್ಯವಿಲ್ಲ: ನಾಗೇಶ್ ಕುಮಾರ್
ಉದ್ಯಾವರ, ಅ.3: ದೇಶದಲ್ಲಿ ತಾಂಡವವಾಡುತ್ತಿರುವ ಪರಧರ್ಮ ಅಸಹನೆ, ಕೋಮುವಾದಕ್ಕೆ ಪರಿಹಾರ ಗಾಂಧಿವಾದವೇ ವಿನಹ ಬೇರೆ ಯಾವುದೂ ಅಲ್ಲ. ಗಾಂಧಿ ತೋರಿದ ದಾರಿಯಲ್ಲಿ ನಮಗೆ ನಡೆಯಲು ಸಾಧ್ಯವಾದರೆ ಮಾತ್ರ ಗಾಂಧಿ ಕಂಡ ಕನಸಿನ ಭಾರತ ನಿರ್ಮಾಣವಾಗಿ ದೇಶದ ಸಮಗ್ರತೆ ಉಳಿದು ಅಭಿವೃದ್ಧಿ ಹೊಂದಬಹುದು ಎಂದು ಕಾಂಗ್ರೆಸ್ ನಾಯಕ, ಚಿಂತಕ ಉದ್ಯಾವರ ನಾಗೇಶ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಾರ್ಯಾಲಯ ದಲ್ಲಿ ಜರಗಿದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗಾಂಧಿವಾದವನ್ನು ಬಿಟ್ಟರೆ ಈ ದೇಶಕ್ಕೆ ಭವಿಷ್ಯವಿಲ್ಲ. ಸ್ವಾತಂತ್ರ ಚಳುವಳಿಯಲ್ಲಿ ಗಾಂಧಿಜಿ ಅವರ ಉಪವಾಸದ ಕಲ್ಪನೆ ಮುಂದೆ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಲು ಕಾರಣವಾಯಿತು. ಅದೇ ರೀತಿ ಈ ದೇಶ ಕಂಡ ಅತ್ಯಂತ ಕ್ರಿಯಾಶೀಲ, ಸರಳ ಪ್ರಧಾನಿಗಳಲ್ಲಿ ದಿ. ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಮುಖರು ಎಂದರು.
ಗಾಂಧಿ ಚಿಂತನೆಗಳು ಮುಂದಿನ ಜನಾಂಗಕ್ಕೆ ದಾಟದಂತೆ ಮಾಡುವ ಹುನ್ನಾರ ಇಂದು ನಡೆದಿದೆ.ಬಿಜೆಪಿಯಂಥ ಮೂಲಭೂತವಾದಿ ಪಕ್ಷಕ್ಕೆ ಗಾಂಧಿ ಚಿಂತನೆಗಳೇ ಮಾರಕ. ಹೀಗಾಗಿ ಸ್ವಚ್ಚ ಭಾರತ್ ಅಭಿಯಾನಕ್ಕೆ ವಿಶೇಷ ಪ್ರಚಾರ ಕೊಟ್ಟು ಗಾಂಧಿಯನ್ನು ಸ್ವಚ್ಚತೆಗೆ ಮೀಸಲಾಗಿಸುವ ಹುನ್ನಾರ ನಡೆಯುತ್ತಿದೆ ಎಂದು ಉದ್ಯಾರ ನಾಗೇಶ್ ಕುಮಾರ್ ನುಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ರೋಯ್ಸೆ ಮರ್ವಿನ್ ಫೆರ್ನಾಂಡಿಸ್, ಉಪಾಧ್ಯಕ್ಷ ಸುಗಂಧಿ ಶೇಖರ್, ಚಂದ್ರಾವತಿ ಎಸ್. ಭಂಡಾರಿ, ಸೋಮಶೇಖರ್ ಸುರತ್ಕಲ್, ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಅನ್ಸರ್, ಪುಂಡರೀಶ್ ಕುಂದರ್, ಮಾಜಿ ಗ್ರಾಪಂ ಸದಸ್ಯರಾದ ಮೇರಿ ಡಿ’ಸೋಜಾ, ಹೆಲನ್ ಫೆರ್ನಾಂಡಿಸ್ ಹಾಗೂ ಇತರರು ಉಪಸ್ಥಿತರಿದ್ದರು.
ಹಿರಿಯ ಕಾರ್ಯಕರ್ತ ಸಂಜೀವ ಸುವರ್ಣ ನಾಯಕರ ಭಾವಚಿತ್ರದ ಮುಂದೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿದರು. ಕಾರ್ಯದರ್ಶಿ ರಿಯಾಝ್ ಪಳ್ಳಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.