ಪ್ಲಾಸ್ಮಾ ದಾನಕ್ಕೆ 5,000 ರೂ. ಪೌಷ್ಠಿಕಾಂಶ ಭತ್ಯೆ : ಕುಟುಂಬ ಕಲ್ಯಾಣ ಇಲಾಖೆ
Update: 2020-10-03 20:30 IST
ಮಂಗಳೂರು, ಅ.3: ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಪ್ಲಾಸ್ಮಾ ದಾನ ಮಾಡುವವರಿಗೆ 5,000 ರೂ. ಮೊತ್ತವನ್ನು ಪೌಷ್ಠಿಕಾಂಶ ಭತ್ಯೆಯಾಗಿ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಕೋವಿಡ್ ಸೋಂಕಿನಿಂದ ಗುಣಮುಖರಾದವರಿಂದ ಸ್ವಯಂ ಪ್ರೇರಿತ ರಕ್ತದಾನದ ಮೂಲಕ ಪಡೆದ ರಕ್ತದಿಂದ ಪ್ಲಾಸ್ಮಾವನ್ನು ಪ್ರತ್ಯೇಕಿಸಿ ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ. ದಾನಿಗಳಿಂದ ಪಡೆದ ರಕ್ತದಿಂದ ಪ್ಲಾಸ್ಮಾವನ್ನು ಪ್ರತ್ಯೇಕಿಸಲು ಬಳಸುವ ಕಿಟ್‌ಗಳ ದರ ಮತ್ತು ಮಾನವ ಸಂಪನ್ಮೂಲದ ಅಗತ್ಯತೆ ಪರಿಗಣಿಸಲಾಗಿದೆ. ಅದರಂತೆ, ಖಾಸಗಿ ಪ್ರಯೋಗಾಲಯದಲ್ಲಿ ದಾನಿಗಳಿಂದ ಪಡೆದ ರಕ್ತದಿಂದ ಯುನಿಟ್ ಪ್ಲಾಸ್ಮಾವನ್ನು ಪ್ರತ್ಯೇಕಿಸುವ ಪ್ರಕ್ರಿಯೆಗೆ 7,500 ರೂ. ಶುಲ್ಕ ನಗದಿಪಡಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟನೆ ತಿಳಿಸಿದೆ.