ಉಡುಪಿ : 158 ಮಂದಿಗೆ ಕೋವಿಡ್ ಸೋಂಕು, 3 ಸಾವು
ಉಡುಪಿ, ಅ.3: ರಾಜ್ಯ ಆರೋಗ್ಯ ಇಲಾಖೆ ಇಂದು ಪ್ರಕಟಿಸಿದ ಕೋವಿಡ್- 19 ರಾಜ್ಯ ಬುಲೆಟಿನ್‌ನಲ್ಲಿ ಉಡುಪಿ ಜಿಲ್ಲೆಯಲ್ಲಿ 158 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಪಾಸಿಟಿವ್ ದೃಢಪಟ್ಟವರ ಸಂಖ್ಯೆ 17,789ಕ್ಕೇರಿದೆ. ಅಲ್ಲದೇ ದಿನದಲ್ಲಿ 297 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಗೊಂಡಿದ್ದು, ಹೀಗೆ ಮನೆಗೆ ತೆರಳಿದರ ಒಟ್ಟು ಸಂಖ್ಯೆ 15,662ಕ್ಕೇರಿದೆ.
ಮೂರು ಬಲಿ: ಜಿಲ್ಲೆಯಲ್ಲಿ ಸದ್ಯ 1973 ಸಕ್ರೀಯ ಕೋವಿಡ್ ಪ್ರಕರಣಗಳಿವೆ. ಶನಿವಾರ ಜಿಲ್ಲೆಯಲ್ಲಿ ಮೂವರು ಕೊರೋನ ಸೋಂಕಿಗೆ ಬಲಿಯಾಗಿದ್ದು, ಇದರಿಂದ ಈವರೆಗೆ ಕೋವಿಡ್‌ಗೆ ಬಲಿಯಾದವರ ಒಟ್ಟು ಸಂಖ್ಯೆ 154ಕ್ಕೇರಿದೆ.
ಜಿಲ್ಲೆಯ 39, 67 ಹಾಗೂ 65 ವರ್ಷ ಪ್ರಾಯದ ಪುರುಷರು ಕೊರೋನ ಸೋಂಕು ದೃಢಪಟ್ಟ ಬಳಿಕ ಅ.1 ರಂದು ಮೃತಪಟ್ಟಿದ್ದಾರೆ. 67 ವರ್ಷದ ವೃದ್ಧರು ಸೆ.20ರಂದು ಚಿಕಿತೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೆ, 39 ವರ್ಷ ಪ್ರಾಯದ ಯುವ ಸೆ.26ರಂದು ಬೇರೆ ಸಮಸ್ಯೆಗೆ ಚಿಕಿತ್ಸೆಗೆ ದಾಖಲಾಗಿದ್ದರು. 65ವರ್ಷ ಪ್ರಾಯದ ವೃದ್ಧರು ಅ.1ರಂದು ಆಸ್ಪತ್ರೆಗೆ ಬಂದು ಚಿಕಿತ್ಸೆ ಪ್ರಾರಂಭಿಸುವ ಮೊದಲೇ ಸೋಂಕಿಗೆ ಬಲಿಯಾಗಿದ್ದರು.
ಮುಷ್ಕರ ಮುಂದುವರಿಕೆ: ಭಾರತೀಯ ಮಜ್ದೂರ್ ಸಂಘ, ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.24ರಿಂದ ನಡೆಸಿರುವ ಮುಷ್ಕರವನ್ನು ಶನಿವಾರ ಅಜ್ಜರಕಾಡು ಭುಜಂಗಪಾರ್ಕ್ ಬಳಿ ಮುಂದುವರಿಸಿದರು.
ಪ್ರಧಾನ ಕಾರ್ಯದರ್ಶಿ ಗುರುರಾಜ್, ಸಂಘಟನ ಕಾರ್ಯದರ್ಶಿ ಪ್ರೀತಂ, ಉಪಾಧ್ಯಕ್ಷ ಡಾ.ರೂಪಕ್ ನಾಗರಾಜ್, ಮಹಿಳಾ ಘಟಕದ ಅಧ್ಯಕ್ಷೆ ಡಾ. ರೇಷ್ಮಾ, ಖಜಾಂಚಿ ಗಿರೀಶ್ ಕಡ್ಡಿಪುಡಿ ಸಹಿತ ಹಲವು ಮಂದಿ ಸಿಬ್ಬಂದಿ ಉಪಸ್ಥಿತರಿದ್ದರು.
ಆಯನೂರು ಪತ್ರ: ಈ ನಡುವೆ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 30000 ಎನ್‌ಎಚ್‌ಎಂ ನೌಕರರು ಇದೀಗ ಶಾಂತಿಯುತ ಮುಷ್ಕರದಲ್ಲಿ ನಿರತರಾಗಿದ್ದು, ಅವರ ಬೇಡಿಕೆಗಳ ಕುರಿತು ಚರ್ಚಿಸಲು ಸರಕಾರ ಕೂಡಲೇ ಸಂಘದ ಪದಾಧಿಕಾರಿ ಗಳನ್ನು ಮಾತುಕತೆಗೆ ಆಹ್ವಾನಿಸಬೇಕೆಂದು ಸಂಘದ ಗೌರವಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ, ಮುಖ್ಯಮಂತ್ರಿ, ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಗ್ರಾಮೀಣಾಭಿವೃದ್ದಿ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.