×
Ad

ರಾಷ್ಟ್ರೀಯ ಕ್ರೀಡಾಪಟು, ಮೀನುಗಾರರ ಮುಖಂಡ ಲೋಕನಾಥ ಬೋಳಾರ ನಿಧನ

Update: 2020-10-03 21:54 IST

ಮಂಗಳೂರು, ಅ.3: ಮಂಗಳೂರಿನ ಮೀನುಗಾರ ಮುಖಂಡ, ಅಂತಾರಾಷ್ಟ್ರೀಯ ವೇಯ್ಟ್ ಲಿಫ್ಟರ್ ಲೋಕನಾಥ ಬೋಳಾರ (73) ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.

ನಿವೃತ್ತ ರೈಲ್ವೆ ಅಧಿಕಾರಿಯಾಗಿದ್ದ ಲೋಕನಾಥ್, ಯಾಂತ್ರಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯ ಮೀನುಗಾರರ ಕ್ರಿಯಾ ಸಮಿತಿ ಪದಾಧಿಕಾರಿಯಾಗಿದ್ದರು. ಭಾರ ಎತ್ತುವ ಸ್ಪರ್ಧೆಯಲ್ಲಿ ದೇಶ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸ್ಪರ್ಧಿಸಿದ್ದಾರೆ. ಜಾವೆಲಿನ್ ಥ್ರೋವರ್, ಗುಂಡು ಎಸೆತ ಕ್ರೀಡೆಯಲ್ಲೂ ರಾಷ್ಟ್ರ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಕೊಡುಗೈ ದಾನಿಯಾಗಿದ್ದ ಅವರು, ಮೀನುಗಾರಿಕಾ ಬಂದರಿನಲ್ಲಿ ಆಳಸಮುದ್ರ ಮೀನುಗಾರಿಕೆಯ ಮೀನು ಮಾರಾಟ ವ್ಯವಸ್ಥೆಯನ್ನು ಸಹಕಾರಿ ಕ್ಷೇತ್ರಕ್ಕೆ ಪರಿಚಯಿಸಿದವರು. ರಾಜ್ಯ ಮೀನುಗಾರಿಕಾ ಇಲಾಖೆಗೆ ಮೀನುಗಾರರ ಪರವಾಗಿ ಸಲಹೆಗಾರರಾಗಿದ್ದರು. ಕರಾವಳಿ ಕರ್ನಾಟಕದ ಆಪದ್ಬಾಂಧವರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಸಂತಾಪ: ಕರಾವಳಿ ಕರ್ನಾಟಕದ ಆಪದ್ಬಾಂಧವರಾಗಿದ್ದ ಲೋಕನಾಥ ಬೋಳಾರ ಅವರನ್ನು ಕಳೆದುಕೊಂಡಿರುವುದು ಮೀನುಗಾರರಿಗೆ ತುಂಬಲಾರದ ನಷ್ಟವಾಗಿದೆ. ಮೀನುಗಾರರಿಗೆ ಸರಕಾರದಿಂದ ಅಪಾರ ಮಟ್ಟದಲ್ಲಿ ಸೌಲಭ್ಯ ಕಲ್ಪಿಸಿದ ಮಹಾನುಭಾವ ಲೋಕನಾಥರು ಎಂದು ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ.

ಪರ್ಸಿನ್ ಮೀನುಗಾರರ ಸಂಘ, ಟ್ರಾಲ್‌ಬೋಟ್ ಮೀನುಗಾರರ ಸಂಘ, ಗಿಲ್‌ನೆಟ್ ಮೀನುಗಾರರ ಸಂಘ, ಸೀಫುಡ್ ಬೈಯರ್ಸ್ ಅಸೋಸಿಯೇಶನ್, ಮೀನು ವ್ಯಾಪಾರಸ್ಥರ ಸಂಘಗಳು ತೀವ್ರ ಸಂತಾಪ ಸೂಚಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News