ಶಾಲೆ, ಕಾಲೇಜು ಪುನರಾರಂಭಕ್ಕೆ ಕೇಂದ್ರ ಸರಕಾರದ ಮಾರ್ಗಸೂಚಿ ಬಿಡುಗಡೆ

Update: 2020-10-03 17:10 GMT

ಹೊಸದಿಲ್ಲಿ, ಅ.3: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಹಂತಹಂತವಾಗಿ ಸಡಿಲಿಸಿರುವ ಕೇಂದ್ರ ಸರಕಾರ ಅಕ್ಟೋಬರ್ 15ರಿಂದ ಅನ್‌ಲಾಕ್ 5 ಜಾರಿಗೊಳಿಸಿದೆ. ಈ ಹಂತದಲ್ಲಿ ಶಾಲೆ, ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಿದೆ. ಆದರೆ ಈ ಕುರಿತ ಅಂತಿಮ ನಿರ್ಧಾರವನ್ನು ಆಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶ ಕೈಗೊಳ್ಳಬೇಕು ಎಂದು ಸೂಚಿಸಿದೆ. ಕೇಂದ್ರ ಬಿಡುಗಡೆಗೊಳಿಸಿರುವ ಮಾರ್ಗಸೂಚಿ ಹೀಗಿದೆ.

ಶಾಲೆ ಮತ್ತು ಕೋಚಿಂಗ್ ಕೇಂದ್ರ: ಪೋಷಕರ ಅಥವಾ ಹೆತ್ತವರ ಲಿಖಿತ ಒಪ್ಪಿಗೆ ಇದ್ದರೆ ಮಾತ್ರ ಮಕ್ಕಳು ಶಾಲೆಗೆ ಬರಬಹುದು. ಆನ್‌ಲೈನ್ ತರಗತಿಗೇ ಆದ್ಯತೆ ನೀಡಬೇಕು. ಶಾಲೆ ಆರಂಭಿಸಲು ಬಯಸುವ ಶಿಕ್ಷಣ ಸಂಸ್ಥೆಗಳು ಆಯಾ ರಾಜ್ಯಗಳ ಶಿಕ್ಷಣ ಮಂಡಳಿ ಜಾರಿಗೊಳಿಸಿರುವ ಪ್ರಮಾಣಿತ ಕಾರ್ಯಾಚರಣ ವಿಧಾನವನ್ನು ಪಾಲಿಸಬೇಕು. ಕಾಲೇಜು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸಲು ಅವಕಾಶವಿದೆ. ಕೇಂದ್ರ ಅನುದಾನಿತ ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಪ್ರಯೋಗಾಲಯ/ ಸಂಶೋಧನಾ ಕಾರ್ಯದ ಅಗತ್ಯದ ಮನವರಿಕೆಯಾಗಬೇಕು. ರಾಜ್ಯ ಸರಕಾರದ ಅಧೀನದ ವಿವಿಗಳು, ಖಾಸಗಿ ವಿವಿಗಳು ಇತ್ಯಾದಿಗಳಲ್ಲಿ ಪ್ರಯೋಗಾಲಯ, ಸಂಶೋಧನಾ ಕಾರ್ಯ ನಡೆಸಲು ಅವಕಾಶ ನೀಡುವ ಬಗ್ಗೆ ಸಂಬಂಧಿತ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಮುಖ್ಯಸ್ಥರು ನಿರ್ಧರಿಸಬೇಕು ಎಂದು ಮಾರ್ಗಸೂಚಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News