ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ: ಎನ್‌ಎಂಸಿ ಸ್ಪಷ್ಟನೆ

Update: 2020-10-03 17:23 GMT

ಹೊಸದಿಲ್ಲಿ, ಅ.3: ಕೊರೋನ ಸೋಂಕಿನ ಸಂದರ್ಭದ ಹಿನ್ನೆಲೆಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಥಿಯರಿ ತರಗತಿ ನಡೆಸಲು ಅನುಮತಿ ನೀಡಲಾಗಿದೆ.

ಇದು ಕೊರೋನ ಸೋಂಕಿನ ಸಂದರ್ಭಕ್ಕೆ ಮಾತ್ರ ಅನ್ವಯಿಸುತ್ತದೆ ಎಂದು ನ್ಯಾಷನಲ್ ಮೆಡಿಕಲ್ ಕಮಿಷನ್ (ಎನ್‌ಎಂಸಿ) ಹೇಳಿದೆ. ಕಾಲೇಜುಗಳು ಪುನರಾರಂಭಗೊಂಡ ಬಳಿಕ ಎಲ್ಲಾ ಎಂಬಿಬಿಎಸ್ ವಿಷಯಗಳ ಪ್ರಾಯೋಗಿಕ ಮತ್ತು ಕ್ಲಿನಿಕಲ್ ತರಬೇತಿ ತರಗತಿಗಳು ಈ ವರ್ಷದ ಪಠ್ಯಸೂಚಿಯಂತೆ ನಡೆಯಬೇಕು ಎಂದು ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಪತ್ರ ಬರೆದಿರುವುದಾಗಿ ಎನ್‌ಎಂಸಿ ಕಾರ್ಯದರ್ಶಿ ಡಾ. ಆರ್‌ಕೆ ವತ್ಸ ಹೇಳಿದ್ದಾರೆ.

ಎಂಬಿಬಿಎಸ್ ಪಠ್ಯಸೂಚಿಯ ಪ್ರಕಾರ ಥಿಯರಿ ತರಗತಿಗಳನ್ನು ಆನ್‌ಲೈನ್ ಮೂಲಕ ನಡೆಸುವುದಕ್ಕೆ ಎನ್‌ಎಂಸಿ ಅನುಮತಿ ನೀಡಿಲ್ಲ ಎಂದು ಈ ಹಿಂದೆ ವರದಿಯಾಗಿತ್ತು. ಎಂಬಿಬಿಎಸ್ ಪ್ರಥಮ ಸೆಮಿಸ್ಟರ್‌ನ ಥಿಯರಿ ತರಗತಿಗಳನ್ನು ಆನ್‌ಲೈನ್ ಮೂಲಕ ನಡೆಸಲು ವಿದೇಶಿ ವೈದ್ಯಕೀಯ ವಿವಿಗಳಿಗೆ ಎಂಎನ್‌ಸಿ ಅನುಮತಿ ನೀಡುತ್ತದೆಯೇ ಎಂದು ವಿದ್ಯಾರ್ಥಿಯೊಬ್ಬ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಪ್ರಶ್ನಿಸಿದ್ದ. ಇದಕ್ಕೆ ಆಗಸ್ಟ್ 13ರಂದು ಉತ್ತರಿಸಿದ್ದ ಎನ್‌ಎಂಸಿ, ಸಮಾನ ವೈದ್ಯಕೀಯ ಕೋರ್ಸ್‌ಗಳಲ್ಲಿ ಎಂಬಿಬಿಎಸ್‌ನ ಯಾವುದೇ ಆನ್‌ಲೈನ್ ತರಗತಿಯನ್ನು ಮಾನ್ಯ ಮಾಡುವುದಿಲ್ಲ ಎಂದು ತಿಳಿಸಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಾ ವತ್ಸ, ಈ ಉತ್ತರ ವಿದೇಶಿ ವೈದ್ಯಕೀಯ ಸಂಸ್ಥೆಗಳಿಗೆ ಮಾತ್ರ ಸಂಬಂಧಿಸಿದೆ ಎಂದಿದ್ದಾರೆ. ಆದರೆ ವಿದೇಶಿ ವಿವಿಯಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪಡೆದಿದ್ದು, ಕೊರೋನ ಪಿಡುಗಿನಿಂದ ಈಗ ಭಾರತದಲ್ಲೇ ಉಳಿದುಕೊಂಡಿರುವ ವಿದ್ಯಾರ್ಥಿಗಳು ಎನ್‌ಎಂಸಿಯ ದ್ವಿಮುಖ ನೀತಿಯ ಬಗ್ಗೆ ಅಸಮಾಧಾನ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News