ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಕ್ರಮ: ಮಾಜಿ ಸರಕಾರಿ ನೌಕರರ ಆಗ್ರಹ

Update: 2020-10-03 17:28 GMT

ಹೊಸದಿಲ್ಲಿ,ಅ.3: ಹತ್ರಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ ವಹಿಸಿದ್ದ ಪೊಲೀಸ್ ಮತ್ತು ಜಿಲ್ಲಾಡಳಿತದ ಅಧಿಕಾರಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ದೇಶಾದ್ಯಂತದ 90ಕ್ಕೂ ಅಧಿಕ ಮಾಜಿ ಸರಕಾರಿ ನೌಕರರು ಬಹಿರಂಗ ಪತ್ರವೊಂದರಲ್ಲಿ ಆಗ್ರಹಿಸಿದ್ದಾರೆ.

 ಕೇಂದ್ರ ಮತ್ತು ರಾಜ್ಯಸರಕಾರಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದ ಭಾರತೀಯ ಆಡಳಿತಾತ್ಮಕ,ಕಂದಾಯ,ವಿದೇಶ ಮತ್ತು ಅರಣ್ಯ ಸೇವೆಗಳ ನಿವೃತ್ತ ಅಧಿಕಾರಿಗಳು ಪತ್ರಕ್ಕೆ ಸಹಿ ಹಾಕಿದವರಲ್ಲಿ ಸೇರಿದ್ದಾರೆ.

ಪ್ರಕರಣವನ್ನು ಮುಚ್ಚಿಹಾಕಲು ರಾಜಕೀಯ ಒತ್ತಡಕ್ಕೆ ಬಲಿಯಾಗದಂತೆ ಉತ್ತರ ಪ್ರದೇಶ ಸರಕಾರದ ಅಧಿಕಾರಿಗಳನ್ನು ಪತ್ರದಲ್ಲಿ ಆಗ್ರಹಿಸಲಾಗಿದೆ. ‘ಈ ದೇಶದ ಜನರು ಈಗಲೂ ವಿಶ್ವಾಸವನ್ನು ಹೊಂದಿರುವ ಐಎಎಸ್ ಮತ್ತು ಐಪಿಎಸ್‌ನ ಹೆಮ್ಮೆಯ ಸಂಪ್ರದಾಯಗಳನ್ನು ಪಾಲಿಸುವಂತೆ ನಾವು ಉತ್ತರ ಪ್ರದೇಶ ಸರಕಾರದ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದೇವೆ. ಉ.ಪ್ರದೇಶದ ಆಡಳಿತಶಾಹಿ ಮತ್ತು ಪೊಲೀಸರು,ವಿಶೇಷವಾಗಿ ಅಖಿಲ ಭಾರತ ಸೇವೆಗಳ ಅಧಿಕಾರಿಗಳು ರಾಜಕೀಯ ಆದೇಶಗಳಿಗೆ ಶರಣಾಗಿರುವುದು ಈ ಸೇವೆಗಳಲ್ಲಿರುವುದು ಗೌರವದ ಸಂಕೇತ ಎಂದು ಭಾವಿಸಿರುವ ನಮಗೆ ಅವಮಾನವನ್ನುಂಟು ಮಾಡಿದೆ ’ಎಂದು ಮಾಜಿ ಅಧಿಕಾರಿಗಳು ಪತ್ರದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News