ಎನ್‌ಕೌಂಟರ್‌ಗೆ ಬಲಿಯಾಗಿ ದಫನ ಮಾಡಲಾಗಿದ್ದ ಕಾರ್ಮಿಕರ ಮೃತದೇಹ ಕುಟುಂಬದವರಿಗೆ ಹಸ್ತಾಂತರ

Update: 2020-10-03 17:28 GMT

ಶ್ರೀನಗರ, ಅ.3: ಶೋಫಿಯಾನ್‌ನಲ್ಲಿ ಜುಲೈ 18ರಂದು ನಡೆದಿದ್ದ ಎನ್‌ಕೌಂಟರ್ ಸಂದರ್ಭ ಮೃತಪಟ್ಟ ಬಳಿಕ ದಫನ ಮಾಡಲಾಗಿದ್ದ ಮೂವರು ಕಾರ್ಮಿಕರ ಮೃತದೇಹವನ್ನು ಮಣ್ಣಿನಡಿಯಿಂದ ಹೊರತೆಗೆದು ಮೃತರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.

ಶೋಫಿಯಾನ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟವರು ಉಗ್ರರು ಎಂದು ಹೇಳಿಕೊಂಡಿದ್ದ ಸೇನಾಪಡೆ ಮೃತದೇಹವನ್ನು ದಫನ ಮಾಡಿತ್ತು. ಆದರೆ ಮೃತರಾದ ರಜೌರಿ ಮೂಲದ ಅಬ್ರಾರ್ ಅಹ್ಮದ್, ಇಮ್ತಿಯಾಝ್ ಅಹ್ಮದ್ ಮತ್ತು ಮುಹಮ್ಮದ್ ಇಬ್ರಾರ್ ಉಗ್ರರಲ್ಲ, ಕಾರ್ಮಿಕರು. ಸೇನಾಪಡೆಯ ಅಚಾತುರ್ಯದಿಂದ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮೃತರ ಸಂಬಂಧಿಕರು ದೂರಿದ್ದರು.

ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಶೋಫಿಯಾನ್ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್, ಇಬ್ಬರು ನಾಗರಿಕರನ್ನು ವಶಕ್ಕೆ ಪಡೆಯಲು ಸೂಚಿಸಿದ್ದರು. ಇವರಿಬ್ಬರು ಭಾರತೀಯ ಸೇನೆಗೆ ಮಾಹಿತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೆ ಮೃತ ಯುವಕರೊಂದಿಗೆ ಕೊನೆಯದಾಗಿ ಸಂಪರ್ಕ ಹೊಂದಿದ್ದರು ಎಂದು ಸೇನಾ ನ್ಯಾಯಾಲಯದ ವಿಚಾರಣೆಯಲ್ಲಿ ದೃಢಪಟ್ಟಿತ್ತು. ಮೃತ ಯುವಕರು ಉಗ್ರರು ಎಂದು ಮಾಹಿತಿದಾರರು ತಿಳಿಸಿದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ. ಯೋಧರು 1990ರ ಸಶಸ್ತ್ರ ಪಡೆ ಕಾಯ್ದೆಯಡಿಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಸೆಪ್ಟಂಬರ್ 18ರಂದು ಸೇನೆ ಒಪ್ಪಿಕೊಂಡಿತ್ತು.

ಬಳಿಕ ಪ್ರಕರಣದ ತನಿಖೆ ಆರಂಭಿಸಲಾಗಿತ್ತು. ಮೃತ ಯುವಕರ ಡಿಎನ್‌ಎ, ರಜೌರಿಯಲ್ಲಿರುವ ಪೋಷಕರ ಡಿಎನ್‌ಎಯೊಂದಿಗೆ ತಾಳೆಯಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಹೂತಿರುವ ಮೃತದೇಹವನ್ನು ಹೊರತೆಗೆದು ಕುಟುಂಬದವರಿಗೆ ಹಸ್ತಾಂತರಿಸುವ ಕಾರ್ಯ ಶುಕ್ರವಾರ ಪೂರ್ಣಗೊಂಡಿದೆ ಎಂದು ಜಮ್ಮು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್‌ಬಾಗ್ ಸಿಂಗ್ ಹೇಳಿದ್ದಾರೆ. ಕಾರ್ಮಿಕರನ್ನು ಉಗ್ರರೆಂದು ತಪ್ಪುತಿಳಿದು ಹತ್ಯೆ ಮಾಡಿದ ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ತರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಮೃತ ಯುವಕರ ಹೆತ್ತವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News