ಅಫ್ಘಾನ್: ಕಾರ್‌ ಬಾಂಬ್ ದಾಳಿಗೆ ಕನಿಷ್ಠ 15 ಬಲಿ

Update: 2020-10-03 17:51 GMT

ಜಲಾಲಬಾದ್,ಅ.3: ಪೂರ್ವ ಅಪ್ಘಾನಿಸ್ತಾನದಲ್ಲಿ ಸರಕಾರಿ ಕಟ್ಟಡವೊಂದನ್ನು ಗುರಿಯಾಗಿರಿಸಿಕೊಂಡು ಭಯೋತ್ಪಾದಕರು ಶನಿವಾರ ನಡೆಸಿದ ಕಾರ್‌ಬಾಂಬ್ ದಾಳಿಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಹಾಗೂ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ನಂಗರ್‌ಹಾರ್ ಪ್ರಾಂತದ ಘನಿ ಖೇಲ್ ಜಿಲ್ಲೆಯಲ್ಲಿರುವ ಸರಕಾರಿ ಕಚೇರಿ ಕಟ್ಟಡದ ಆವರಣದಲ್ಲಿ ಈ ಸ್ಫೋಟ ನಡೆದಿದೆ. ಈ ಕಟ್ಟಡದಲ್ಲಿ ಕೆಲವು ಸೇನಾ ಕಚೇರಿಗಳೂ ಇದ್ದವು ಎಂದು ನಂಗರ್‌ಹಾರ್ ಪ್ರಾಂತ ಸರಕಾರದ ವಕ್ತಾರ ಅತಾವುಲ್ಲಾ ಕೊಗ್ಯಾನಿ ತಿಳಿಸಿದ್ದಾರೆ.

 ಜಿಲ್ಲಾ ಮುಖ್ಯ ಕಾರ್ಯಾಲಯ ಕಚೇರಿಯ ಪ್ರವೇಶ ದ್ವಾರದ ಬಳಿ ಕಾರ್‌ಬಾಂಬ್ ಅನ್ನು ಡಿಟೋನೇಟರ್ ಬಳಸಿ ಸ್ಫೋಟಿಸಲಾಗಿದೆ. ಹಲವಾರು ದಾಳಿಕೋರರು ಕಟ್ಟಡದ ಆವರಣದೊಳಗೆ ನುಗ್ಗಲು ಯತ್ನಿಸಿದರಾದರೂ ಅವರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ ಎಂದು ಕೊಗ್ಯಾನಿ ತಿಳಿಸಿದ್ದಾರೆ.

 ಕಾರ್‌ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಅಫ್ಘಾನ್ ಭದ್ರತಾ ಪಡೆಗಳ ಸಿಬ್ಬಂದಿಯೆಂದು ಅವರು ಹೇಳಿದ್ದಾರೆ. ಆದರೆ ಹಲವಾರು ನಾಗರಿಕರು ಕೂಡಾ ದಾಳಿಯಲ್ಲಿ ಮೃತಪಟ್ಟಿರುವುದಾಗಿ ಅವರು ತಿಳಿಸಿದ್ದಾರೆ. ಈವರೆಗೆ ಯಾವುದೇ ಬಂಡುಕೋರ ಗುಂಪು ಈ ದಾಳಿಯ ಹೊಣೆ ಹೊತ್ತಿಲ್ಲ. ಆದರೆ ಈ ಭಯೋತ್ಪಾದಕ ದಾಳಿಯ ಹಿಂದೆ ತಾಲಿಬಾನ್ ಕೈವಾಡವಿದೆಯೆಂದು ನಂಗರ್‌ಹಾರ್‌ನ ಪ್ರಾಂತೀಯ ಪೊಲೀಸ್ ವಕ್ತಾರ ಫರೀದ್ ಖಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News