ಹತ್ರಸ್ ಪ್ರಕರಣ: ಸಿಬಿಐ ತನಿಖೆಗೆ ಸಂತ್ರಸ್ತ ಕುಟುಂಬ ವಿರೋಧ
ಆಗ್ರಾ, ಅ.4: ರಾಜ್ಯದ ಹತ್ರಸ್ ಜಿಲ್ಲೆಯಲ್ಲಿ ದಲಿತ ಯುವತಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವಿವಾರ ಶಿಫಾರಸು ಮಾಡಿದ್ದರು. ವಿಶೇಷ ತನಿಖಾ ತಂಡ(ಸಿಟ್)ರವಿವಾರ ಸಂತ್ರಸ್ತೆಯ ಕುಟುಂಬದ ಸದಸ್ಯರ ಹೇಳಿಕೆಯನ್ನು ಪಡೆದುಕೊಳ್ಳುವುದರೊಂದಿಗೆ ತನ್ನ ತನಿಖೆಯನ್ನು ಮುಂದುವರಿಸುತ್ತಿದೆ.
ಇಡೀ ದೇಶದಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿರುವ ಘಟನೆಯ ಬಗ್ಗೆ ಸಿಐಬಿ ತನಿಖೆಗೆ ಸಂತ್ರಸ್ತ ಯುವತಿಯ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದು, ನ್ಯಾಯಾಂಗ ತನಿಖೆಗೆ ಒಲವು ವ್ಯಕ್ತಪಡಿಸಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿ ಭಗವಾನ್ ಸ್ವರೂಪ್ ನೇತೃತ್ವದ ಎಸ್‌ಐಟಿ ತಂಡವು ಹತ್ರಸ್‌ನ ಬೂಲ್‌ಗಾರಿ ಗ್ರಾಮದಲ್ಲಿ ಸಂಬಂಧಪಟ್ಟ ಜನರೊಂದಿಗೆ ಸಂವಹನ ನಡೆಸುತ್ತಿದೆ. ಹೇಳಿಕೆ ನೀಡಲು ಬಯಸುವ ಎಲ್ಲರಿಗೂ ಸ್ವಾಗತವಿದೆ ಎಂದು ಹೇಳಿದೆ. ಸಿಟ್ ತಂಡವು ಗುರುವಾರ ಗ್ರಾಮಸ್ಥರೊಂದಿಗೆ ಸಂವಹನ ನಡೆಸಿದ್ದು, ಅಪರಾಧ ಸ್ಥಳಕ್ಕೂ ಭೇಟಿ ನೀಡಿತ್ತು.
ಸೆ.14 ರಂದು ಯುವತಿಯನ್ನು ನಾಲ್ಕು ಮಂದಿ ಮೇಲ್ಜಾತಿಗೆ ಸೇರಿದವರು ಅತ್ಯಾಚಾರ ಮಾಡಿದ್ದಲ್ಲದೆ ಚಿತ್ರಹಿಂಸೆ ನೀಡಿದ್ದರು. ಯುವತಿ ದಿಲ್ಲಿಯ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದರು. ಮರುದಿನ ಮುಂಜಾನೆ 2:30ರ ಸುಮಾರಿಗೆ ಕುಟುಂಬ ಸದಸ್ಯರ ಆಶಯಕ್ಕೆ ವಿರುದ್ಧವಾಗಿ ಯುವತಿಯ ಅಂತ್ಯಕ್ರಿಯೆ ನಡೆಸಲಾಗಿತ್ತು.