×
Ad

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಬೊಳ್ಳಾಡಿ ಇಬ್ರಾಹೀಂ ಹಾಜಿ ನಿಧನ

Update: 2020-10-04 13:39 IST

ಪುತ್ತೂರು : ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಕೃಷಿಕ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಬೊಳ್ಳಾಡಿ ನಿವಾಸಿ ಇಬ್ರಾಹೀಂ ಹಾಜಿ (99) ಅವರು ಅಲ್ಪ ಕಾಲದ ಅಸೌಖ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಬೊಳ್ಳಾಡಿ ಇಬ್ರಾಹೀಂ ಹಾಜಿ ಅವರು 1934ರಲ್ಲಿ ಮಹಾತ್ಮ ಗಾಂಧೀಜಿ ಅವರು ಪುತ್ತೂರಿಗೆ ಅಗಮಿಸಿದ್ದ ಸಂದರ್ಭದಲ್ಲಿ ಅವರೊಂದಿಗೆ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿದ್ದರು ಎನ್ನಲಾಗಿದ್ದು, ಗಾಂಧೀಜಿ ಅವರೊಂದಿಗೆ ಜಾಥಾದಲ್ಲಿ ಬೆಂಗಳೂರು ತನಕ ಕಾಲ್ನಡಿಗೆಯಲ್ಲಿ ಸಾಗಿದ್ದರು. ಈ ದೇಶದ ಸ್ವಾತಂತ್ರ್ಯ ಹೊರಾಟದಲ್ಲಿ ಚಾಟಿ ಎಟು, ಪ್ರತಿಭಟನೆ, ಹೋರಾಟ ಮುಂತಾದುವುಗಳಲ್ಲಿ ಭಾಗವಹಿಸಿದ್ದೆ ಎಂದು ಸ್ವತಃ ಇಬ್ರಾಹೀಂ ಹಾಜಿ ಅವರು ಸಂದರ್ಶನದಲ್ಲಿ ಹೇಳಿದ್ದರು.

ಒಳಮೊಗ್ರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿದ್ದ ಅವರು ಶೇಖಮಲೆ ಜಮಾಅತ್‍ನ ಮಾಜಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಶಿಕ್ಷಣ ಪ್ರೇಮಿಯೂ ಆಗಿದ್ದ ಅವರು ಶಾಲಾ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ಜಾಗದ ತಕರಾರು ಉಂಟಾದಾಗ ಮುಂಚೂಣಿಯಲ್ಲಿ ನಿಂತು ಅದನ್ನು ಪರಿಹರಿಸಿ ಶಾಲೆ ನಡೆಯಲು ಅವಕಾಶ ಒದಗಿಸಿಕೊಟ್ಟ ಕೀರ್ತಿಯನ್ನು ಹೊಂದಿದ್ದರು.

ತನ್ನ ಇಳಿ ವಯಸ್ಸಿನಲ್ಲಿಯೂ ರಾಜ್ಯ ರೈತ ಸಂಘ ಹಸಿರು ಸೇನೆಯ ಸದಸ್ಯರಾಗಿ ಇತ್ತಿಚಿನ ವರೆಗೂ ಎಲ್ಲಾ ರೈತ ಚಳುವಳಿಯಲ್ಲಿ ಭಾಗವಹಿಸುತ್ತಿದ್ದರು.

ಮೃತರು ನಾಲ್ಕು ಮಂದಿ ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಧಫನ ಕಾರ್ಯವು ಶೇಖಮಲೆ ಮಸೀದಿ ವಠಾರದಲ್ಲಿ ನಡೆಸಲಾಯಿತು.

ಸಂತಾಪ

ಬೊಳ್ಳಾಡಿ ಇಬ್ರಾಹೀಂ ಹಾಜಿ ಅವರ ನಿಧನಕ್ಕೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಅನ್ಸಾರುದ್ದೀನ್ ಯತೀಂ ಖಾನಾದ ಅಧ್ಯಕ್ಷ ಕೆ.ಪಿ. ಅಹ್ಮದ್ ಹಾಜಿ ಆಕರ್ಷಣ್, ರಾಜ್ಯ ರೈತ ಸಂಘ ಹಸಿರು ಸೇನೆಯ ದ.ಕ. ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು, ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ, ಶೇಖಮಲೆ ಜಮಾಅತ್ ಅಧ್ಯಕ್ಷ ಸಿದ್ದೀಕ್ ಹಾಜಿ ಸಂತಾಪ ವ್ಯಕ್ತ ಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News