ಸಿಎಎ ವಿರೋಧಿ ಹಿಂಸಾಚಾರ ಪ್ರಕರಣ: ಆರೋಪಪಟ್ಟಿಗೆ ನಾಲ್ವರ ಹೆಸರು ಸೇರಿಸಿದ ಎಸ್‍ಐ ಅಮಾನತು
ಲಕ್ನೋ: ಬಿಜನೋರ್ ಜಿಲ್ಲೆಯಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿ ಪ್ರತಿಭಟನೆ ವೇಳೆ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯನ್ನು ಅಮಾನತು ಮಾಡಲಾಗಿದೆ. ಮೇಲಧಿಕಾರಿಗಳ ಅನುಮೋದನೆ ಇಲ್ಲದೇ, ಆರೋಪಪಟ್ಟಿಗೆ ಮೂರರಿಂದ ನಾಲ್ಕು ಮಂದಿಯ ಹೆಸರು ಸೇರಿಸಿದ ಹಿನ್ನೆಲೆಯಲ್ಲಿ ತನಿಖಾಧಿಕಾರಿ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ ಎಂದು indianexpress.com ವರದಿ ಮಾಡಿದೆ.
ಡಿಸೆಂಬರ್‍ನಲ್ಲಿ ಸಂಭವಿಸಿದ ಪ್ರಕರಣದ ಬಗ್ಗೆ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಈ ಸಂಬಂಧ ಸಬ್ ಇನ್‍ಸ್ಪೆಕ್ಟರ್ ನರೇಶ್ ಪಾಲ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಧರ್ಮವೀರ್ ಸಿಂಗ್ ಹೇಳಿದ್ದಾರೆ. ಗ್ರಾಮೀಣ ವಲಯದ ಹೆಚ್ಚುವರಿ ಎಸ್ಪಿ, ಧಾಂಪುರ ವೃತ್ತ ನಿರೀಕ್ಷಕರು ಮತ್ತು ಬಿಜನೋರ್ ಕೋತ್ವಾಲಿ ಸಿಟಿ ಸ್ಟೇಷನ್‍ನ ಸ್ಟೇಷನ್ ಹೌಸ್ ಆಫೀಸರ್ ಅವರ ಅನುಮೋದನೆ ಇಲ್ಲದೇ ಹೆಚ್ಚುವರಿ ಹೆಸರುಗಳನ್ನು ಆರೋಪಪಟ್ಟಿಯಲ್ಲಿ ಸೇರಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಆರೋಪಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಅವರ ಅಧಿಕಾರ ವ್ಯಾಪ್ತಿಯಿಂದ ಹೊರಗಿರುವ ವೃತ್ತ ನಿರೀಕ್ಷಕರ ಅನುಮೋದನೆ ಪಡೆದಿದ್ದರು ಎಂದು ಧರ್ಮವೀರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಾರದೇ ಕಳೆದ ತಿಂಗಳು ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಇದು ಶಿಷ್ಟಾಚಾರದ ಉಲ್ಲಂಘನೆಯಾಗಿದ್ದು, ಈ ಕಾರಣಕ್ಕೆ ಅವರನ್ನು ಗುರುವಾರ ಅಮಾನತು ಮಾಡಲಾಗಿದೆ ಎಂದು ವಿವರಿಸಿದ್ದಾರೆ. 30 ಮಂದಿಯ ಹೆಸರನ್ನು ಆರೋಪಪಟ್ಟಿಯಲ್ಲಿ ಸೇರಿಸಲಾಗಿದೆ.